ಮದುವೆ, ಆಸ್ಪತ್ರೆ, ಪ್ರವಾಸ ಅಥವ ಇನ್ನಿತರ ಕಾರ್ಯಕ್ರಮಗಳಿಗೆ ಮನೆ ಮಂದಿಯೆಲ್ಲಾ ತೆರಳುವ ಸಮಯದಲ್ಲಿ ಕಳ್ಳತನ ಅಥವಾ ಮನೆ ಸುರಕ್ಷತೆಯ ಬಗ್ಗೆ ಆತಂಕಪಡುವ ಬದಲಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವತಿಯಿಂದ ಆರಂಭಿಸಿರುವ ಎಲ್ ಎಚ್ ಎಂ ಎಸ್ ಚಿಕ್ಕಬಳ್ಳಾಪುರ ಪೊಲೀಸ್ ಆಪ್‌ನ್ನು ಪ್ರತಿಯೊಬ್ಬರೂ ತಮ್ಮ ತಮ್ಮ ಮೊಬೈಲ್‌ನಲ್ಲಿ ಅಳವಡಿಸಿಕೊಳ್ಳಿ ಎಂದು ನಗರಠಾಣೆ ಪಿಎಸ್ಸೈ ಸತೀಶ್ ಮನವಿ ಮಾಡಿದರು.
ನಗರದ ಪೊಲೀಸ್ ಠಾಣೆಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲ್ಲೂಕಿನಾದ್ಯಂತ ಕಳ್ಳತನ ತಡೆಯುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಎಲ್ ಎಚ್ ಎಂ ಎಸ್ ಸೇವೆ ಪಡೆಯಲು ಬಯಸುವ ನಾಗರಿಕರು ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಎಲ್ ಎಚ್ ಎಂ ಎಸ್ ಚಿಕ್ಕಬಳ್ಳಾಪುರ ಪೊಲೀಸ್ ಆಪ್‌ನ್ನು ಅಳವಡಿಸಿಕೊಂಡು ಪೂರ್ಣ ಮಾಹಿತಿ ಸಮೇತ ಹೆಸರು ನೋಂದಾಯಿಸಿಕೊಂಡಲ್ಲಿ ಅಂತಹವರ ಮನೆಗಳಲ್ಲಿ ಇಲಾಖೆಯಿಂದ ಮೋಷನ್ ಸೆನ್ಸಾರ್ ಕೆಮೆರಾ ಅಳವಡಿಸುವ ಮೂಲಕ ಕಳ್ಳತನಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದರು.
ಎಲ್ ಎಚ್ ಎಂ ಎಸ್ ಸೇವೆ ಸೇವೆಗೆ ಕೋರಿಕೆ ಸಲ್ಲಿಸಿದ ನಾಗರಿಕರ ಮನೆಗೆ ಇಲಾಖೆ ನೀಡುವ ಕಣ್ಗಾವಲು ಸೇವೆ ಸಂಪೂರ್ಣ ಉಚಿತವಾಗಿದ್ದು ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಠಾಣೆಯ ಮಹಿಳಾ ಪಿಎಸ್ಸೈ ಪದ್ಮಾವತಿ, ಎಎಸ್ಸೈ ನವಾಜ್ ಅಹಮ್ಮದ್, ಪೇದೆ ರಾಜಶೇಖರ್, ಕೃಷ್ಣ ಹಾಜರಿದ್ದರು.