Sidlaghatta : ಲೆಪ್ರೋಸ್ಪೈರೋಸಿಸ್ (ಇಲಿ ಜ್ವರ) ಒಂದು ರೀತಿಯ ಬ್ಯಾಕ್ಟೀರಿಯಾ ಸೋಂಕು. ಇಲಿ ಕಚ್ಚಿ ಮಾತ್ರ ನಿಮಗೆ ಜ್ವರ ಬರಬೇಕು ಎಂದೇನಿಲ್ಲ. ಅದರ ಎಂಜಲು, ಅದರ ಮೂತ್ರ, ಮಲ ಅಥವಾ ಇಲಿಯ ದೇಹದ ಯಾವುದೇ ದ್ರವ ನಿಮ್ಮ ಚರ್ಮಕ್ಕೆ ತಾಗಿದರೆ ನಿಮಗೆ ಸೋಂಕು ಉಂಟಾಗಬಹುದು ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಮನೋಹರ್ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಇಲಿ ಜ್ವರ ಕುರಿತಂತೆ ಮಾಹಿತಿ ಕಾರ್ಯಕಾರ, ಸಕ್ರಿಯ ಕ್ಷಯ ರೋಗ ಪತ್ತೆಯ ಕಾರ್ಯಕ್ರಮ ಹಾಗೂ ತ್ರೈಮಾಸಿಕ ಆಶಾ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ಇಲಿಯ ಬಾಯಿಂದ, ಕಣ್ಣಿನಿಂದ ಅಥವಾ ಮೂಗಿನಿಂದ ಬರುವಂತಹ ದ್ರವಗಳು ಕೂಡ ಹಾನಿಕಾರಕವಾಗಬಹುದು. ಕೆಲವರಿಗೆ ಇಲಿಗಳು ತಮ್ಮ ಉಗುರುನಿಂದ ಪರಚಿ ಹೋದರೆ ಅಥವಾ ಹಾಲಿನಿಂದ ಸಣ್ಣದಾಗಿ ಕಚ್ಚಿದರೆ ಕೂಡ ಜ್ವರ ಬರಬಹುದು. ಕೇವಲ ಇಲಿಗಳು ಮಾತ್ರವಲ್ಲ, ಇಲಿಗಳನ್ನು ಹಿಡಿಯುವ ಬೆಕ್ಕುಗಳು ಮತ್ತು ನಾಯಿಗಳು ಕೂಡ ನಿಮಗೆ ರೋಗ ತರಬಹುದು. ಹೀಗಾಗಿ ಸಾಕುಪ್ರಾಣಿಗಳಿಂದ ಬಹಳಷ್ಟು ಎಚ್ಚರಿಕೆಯಿಂದ ಇರಬೇಕು. ಮನೆಯಲ್ಲಿ ಎಲ್ಲಾದರೂ ಇಲಿಗಳ ಮಲ ಬಿದ್ದಿದ್ದರೆ ಮೊದಲು ಅದನ್ನು ಸ್ವಚ್ಛ ಮಾಡಿ ಸೋಂಕು ವಿರೋಧಿ ದ್ರವ ಸಿಂಪಡಿಸಿ. ಒಂದು ಸಮಾಧಾನಕರ ವಿಷಯ ಎಂದರೆ ಯಾವುದೇ ವ್ಯಕ್ತಿಗೆ ಇಲಿಯ ಮೂಲಕ ಜ್ವರ ಬಂದಿದ್ದರೆ, ಅದು ಮತ್ತೊಬ್ಬ ವ್ಯಕ್ತಿಗೆ ವರ್ಗಾವಣೆ ಆಗುವುದಿಲ್ಲ ಎಂದು ವಿವರಿಸಿದರು.
ತಾಲೂಕು ಪಂಚಾಯಿತಿ ಇಒ ಜಿ. ಮುನಿರಾಜ ಅವರು ಕ್ಷಯ ರೋಗ ಪೀಡಿತರಿಗೆ ಸರ್ಕಾರ ರೋಗ ಗುಣಮಾಡಲು ಏನೇನು ಸವಲತ್ತುಗಳನ್ನು ನೀಡುತ್ತಿದೆ ಎಂಬ ವಿಚಾರವನ್ನು ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ ಮೂರ್ತಿ, ಡಾ. ಮನೋಹರ್, ಸಿಡಿಪಿಒ ನವತಾಜ್, ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ದೇವರಾಜ್, ತಾಲ್ಲೂಕು ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಮುನಿರತ್ನಮ್ಮ, ಆಶಾ ಮೇಲ್ವಿಚಾರಕಿ ಗೀತಾ, ಎಸ್.ಟಿ.ಎಸ್ ನರಸಿಂಹಮೂರ್ತಿ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಆಶಾ ಸುಗಮಕಾರರು ಕಾರ್ಯಕ್ರಮದಲ್ಲಿ ಹಾಜರಿದ್ದರು.