Sidlaghatta : ರಾಮನಗರ ಜಿಲ್ಲೆಯ ಐಜೂರು ಪೊಲೀಸ್ ಠಾಣೆಯಲ್ಲಿ 40 ಮಂದಿ ವಕೀಲರ ವಿರುದ್ದ ಪೊಲೀಸರು ಎಫ್‌ಐಆರ್ ಹಾಕಿರುವುದನ್ನು ಖಂಡಿಸಿ ಶಿಡ್ಲಘಟ್ಟ ವಕೀಲರು ನ್ಯಾಯಾಲಯ ಕಲಾಪಗಳಿಂದ ದೂರ ಉಳಿದು ಸೋಮವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮಾರ್ಗದ ನ್ಯಾಯಾಲಯ ಸಂಕೀರ್ಣದಿಂದ ತಾಲ್ಲೂಕು ಕಚೇರಿಯವರೆಗೂ ಕಾಲ್ನಡಿಗೆಯಲ್ಲಿ ಸಾಗಿ ಬಂದ ವಕೀಲರು ತಾಲ್ಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ವಕೀಲರ ವಿರುದ್ದ ಯಾವುದೆ ತನಿಖೆ ನಡೆಸದೆ ಏಕಾ ಏಕಿ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ರಾಮನಗರದ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣವೊಂದರ ತೀರ್ಪಿಗೆ ಸಂಬಂದಿಸಿದಂತೆ ವಕೀಲನೊಬ್ಬ ನ್ಯಾಯಾಧೀಶರ ವಿರುದ್ದ ಅವಹೇಳನಕಾರಿಯಾದಂತ ಫೋಸ್ಟ್‌ವೊಂದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದ. ಆ ವಕೀಲ ಎಸ್‌ಡಿಪಿಐ ಸಂಘಟನೆಯೊಂದಿಗೆ ಗುರ್ತಿಸಿಕೊಂಡವನಾಗಿದ್ದು ಆತನನ್ನು ವಕೀಲರ ಸಂಘ(ಬಾರ್ ಅಸೋಸಿಯೇಷನ್)ದಿಂದ ಏಕೆ ಉಚ್ಚಾಟಿಸಬಾರದೆಂದು ರಾಮನಗರ ವಕೀಲರ ಸಂಘವು ಪ್ರಶ್ನಿಸಿದ್ದಲ್ಲದೆ ಆ ವಕೀಲನ ವಿರುದ್ದ ಐಜೂರು ಠಾಣೆಯಲ್ಲಿ ದೂರನ್ನು ಸಹ ನೀಡಿದ್ದಾರೆ.
ಆದರೆ ಐಜೂರು ಠಾಣೆಯ ಎಸ್‌ಐ ಸದರಿ ವಕೀಲನ ವಿರುದ್ದ ಯಾವುದೆ ಕ್ರಮ ತೆಗೆದುಕೊಂಡಿಲ್ಲ, ಬದಲಿಗೆ ಎಸ್‌ಡಿಪಿಐ ಸಂಘಟನೆಯಿಂದ ನೀಡಿದ ದೂರಿನ ಮೇರೆಗೆ ಯಾವುದೆ ರೀತಿಯ ವಿಚಾರಣೆ ಮಾಡದೆ ಸತ್ಯಾಸತ್ಯತೆ ತಿಳಿದುಕೊಳ್ಳದೆ 40 ಮಂದಿ ವಕೀಲರ ಮೇಲೆ ದೂರನ್ನು ದಾಖಲಿಸಿದ್ದಾರೆ ಎಂದು ದೂರಿದರು.
ಈ ಕೂಡಲೆ ಐಜೂರು ಠಾಣೆಯ ಎಸ್‌ಐ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕು, ೪೦ ಮಂದಿ ವಕೀಲರ ಮೇಲೆ ಹಾಕಿರುವ ಕೇಸನ್ನು ರದ್ದು ಮಾಡಬೇಕು, ವಕೀಲರ ಹಿತರಕ್ಷಣಾ ಕಾಯಿದೆಯನ್ನು ಅನುಷ್ಠಾನ ಮಾಡಬೇಕೆಂದು ಆಗ್ರಹಿಸಿ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಶಿರಸ್ತೇದಾರ್ ಆಸಿಯಾಬಿ ಅವರು ಮನವಿಯನ್ನು ಸ್ವೀಕರಿಸಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ.ಪಾಪಿರೆಡ್ಡಿ, ಪ್ರಧಾನ ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ಹಿರಿಯ ವಕೀಲರಾದ ಅಶ್ವತ್ಥನಾರಾಯಣ, ಸತ್ಯನಾರಾಯಣಬಾಬು, ಬೂದಾಳ ವಿಶ್ವನಾಥ್, ಬಸವನಪರ್ತಿ ನಾಗರಾಜ್, ವೆಂಕಟೇಶ್, ವೇಣುಗೋಪಾಲರೆಡ್ಡಿ, ಲಕ್ಷ್ಮಿ, ದ್ಯಾವಪ್ಪ, ಇನ್ನಿತರರು ಹಾಜರಿದ್ದರು.