ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ವಕೀಲ ನವಿಲೆ ರವೀಂದ್ರ ಅವರ ಹತ್ಯೆಯನ್ನು ಖಂಡಿಸಿ ನಗರದಲ್ಲಿ ಗುರುವಾರ ವಕೀಲರು ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.
ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಹರೀಶ್ ಮಾತನಾಡಿ, “ವಕೀಲ ರವೀಂದ್ರ ಅವರು ಕೊಲೆಯಾಗಿರುವುದು ದುರದೃಷ್ಟಕರ. ಇದೊಂದು ಘೋರ ಕೃತ್ಯ. ನ್ಯಾಯವನ್ನು ಎತ್ತಿ ಹಿಡಿಯುವ ವಕೀಲರನ್ನೇ ಬರ್ಬರವಾಗಿ ಹತ್ಯೆ ಮಾಡಿರುವುದು ಇಡೀ ಸಮಾಜವೇ ತಲೆತಗ್ಗಿಸುವ ವಿಚಾರ. ಈ ಹತ್ಯೆಯ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು” ಎಂದು ಅವರು ಆಗ್ರಹಿಸಿದರು.
“ಸಂವಿಧಾನದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಕೀಲರ ಮೇಲೆ ರಾಜ್ಯದಲ್ಲಿ ದಿನೇ ದಿನೇ ಹಲ್ಲೆ, ಕೊಲೆ ಪ್ರಯತ್ನ ಹೆಚ್ಚಾಗುತ್ತಿದ್ದು, ಹತ್ಯೆಗಳೂ ನಡೆಯುತ್ತಿವೆ. ನ್ಯಾಯಾಲಯದ ಅಧಿಕಾರಿಗಳಾಗಿರುವ ವಕೀಲರ ರಕ್ಷಣೆಗಾಗಿ ಸರ್ಕಾರಗಳು ಇದುವರೆಗೂ ಯಾವುದೇ ಕಾನೂನುಗಳನ್ನು ರೂಪಿಸದಿರುವುದು ದುರದೃಷ್ಟಕರ. ತಕ್ಷಣವೇ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕು” ಎಂದು ಒತ್ತಾಯಿಸಿದರು.
ವಕೀಲರಾದ ರಾಮಕೃಷ್ಣ, ಡಿ.ಸಿ.ಮಂಜುನಾಥ್, ಪ್ರಭು, ಕೃಷ್ಣಮೂರ್ತಿ, ಸುಧಾಕರ್, ಚೇತನ್, ಮಂಜುನಾಥ್, ಮಂಜುಕಿರಣ್, ಸಿ.ಜಿ.ಭಾಸ್ಕರ್, ಕೆ.ಎಂ.ಮಂಜುನಾಥ್, ಚಂದ್ರಶೇಖರ್, ಜಿ.ಎಂ.ಶ್ರೀನಿವಾಸ್ ಹಾಜರಿದ್ದರು.