Sidlaghatta : ರಾಜ್ಯಾದ್ಯಂತ ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆಗಳಿಂದ ವಕೀಲರು ನಿರ್ಭೀತಿಯಿಂದ ಕಾನೂನು ಬದ್ದ ಚಟುವಟಿಕೆಗಳಲ್ಲಿ ಭಾಗವಹಿಸುವುದು ಕಷ್ಟ ಸಾಧ್ಯವಾಗಿದೆ. ಹಾಗಾಗಿ ಸರ್ಕಾರ ಈ ಭಾರಿಯ ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಕಾಯಿದೆ ಜಾರಿಗೊಳಿಸಬೇಕು ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ ಒತ್ತಾಯಿಸಿದರು.
ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಮಂಡಿಸಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳೊಂದಿಗೆ ನಗರದ ತಾಲ್ಲೂಕು ಕಚೇರಿಗೆ ಸೋಮವಾರ ಭೇಟಿ ನೀಡಿ ಶಿರಸ್ತೇದಾರ್ ಆಯೀಷಾಭೀ ರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ವಕೀಲರು ತಮ್ಮ ವೃತ್ತಿ ಧರ್ಮದಲ್ಲಿ ಕಕ್ಷಿದಾರನ ಪರವಾಗಿ ಧರ್ಮನಿಷ್ಟೆಯ ಸೇವೆಯನ್ನು ಮಾಡುತ್ತಾ ಬರುತ್ತಿದ್ದು, ಇತ್ತೀಚೆಗೆ ಪದೇ ಪದೇ ವಕೀಲರ ಮೇಲೆ ಹಲ್ಲೆಗಳು ನಡೆಯುತ್ತಿರುವುದರಿಂದ ವಕೀಲರಿಗೆ ಸಂರಕ್ಷಣೆ ಇಲ್ಲವಾಗಿದೆ. ಆದ್ದರಿಂದ ಬೆಂಗಳೂರು ವಕೀಲರ ಸಂಘವು ಈಗಾಗಲೆ ಸರ್ಕಾರಕ್ಕೆ ನುರಿತ ಪರಿಣಿತರಿಂದ ವಕೀಲರ ಸಂರಕ್ಷಣಾ ಕಾಯ್ದೆಯ ಕರಡು ಪ್ರತಿಯನ್ನು ಸಿದ್ದಪಡಿಸಿ ಸಲ್ಲಿಸಿಕೊಂಡಿದ್ದು, ಸರ್ಕಾರವು ಇದುವರೆವಿಗೂ ಸಹ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಿ ಅಂಗೀಕರಿಸಿರುವುದಿಲ್ಲ.
ನ್ಯಾಯಾಲಯದ ಭಾಗವಾದ ವಕೀಲರ ಮೇಲೆ ಮುಂದಿನ ದಿನಗಳಲ್ಲಿ ಹಲ್ಲೆಗಳು ನಡೆಯದಂತೆ ತಡೆಯಲು ಹಾಗೂ ವಕೀಲರ ಹಿತ ಕಾಪಾಡುವ ದೃಷ್ಟಿಯಿಂದಾಗಿ ವಕೀಲರಿಗೆ ಸಂರಕ್ಷಣಾ ಕಾನೂನು ಅಗತ್ಯವಾಗಿರುತ್ತದೆ. ಹಾಗಾಗಿ ಮುಂಬರುವ ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಮಂಡಿಸಿ ಜಾರಿಗೆ ತರಲು ಮುಂದಾಗಬೇಕು ಎಂದು ಮನವಿ ಮಾಡಿದರು.
ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಎಂ.ಬಿ.ಲೋಕೇಶ್, ವಕೀಲರಾದ ಡಿ.ವಿ.ಸತ್ಯನಾರಾಯಣ, ಬಿ.ಪಿ.ಭಾಸ್ಕರ್, ವಿ.ಎಂ.ಬೈರಾರೆಡ್ಡಿ, ಎನ್.ನಾಗರಾಜ್, ಯೋಗಾನಂದ, ವಿಶ್ವನಾಥ್ದ, ದ್ಯಾವಪ್ಪ, ಜೆ.ವೆಂಕಟೇಶ್, ಶ್ರೀನಿವಾಸ್ ಹಾಜರಿದ್ದರು.