ಕೋವಿಡ್ 19 ಪರಿಣಾಮವಾಗಿ ಸಂಕಷ್ಟದಲ್ಲಿರುವ ಯುವ ವಕೀಲರ ನೆರವಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಶಿಸಬೇಕು ಎಂದು ಅಖಲ ಭಾರತ ವಕೀಲರ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಸಮಿತಿ ಆಹ್ವಾನಿತ ಸದಸ್ಯ ಹಾಗೂ ಶಿಡ್ಲಘಟ್ಟ ತಾಲ್ಲೂಕು ವಕೀಲರ ಸಂಘದ ಸದಸ್ಯ ಎಚ್ ಎನ್ ಕೃಷ್ಣ ಮೂರ್ತಿ ಒತ್ತಾಯಿಸಿದ್ದಾರೆ.
ಬುಧವಾರ ಸರ್ಕಾರ ಘೋಷಣೆ ಮಾಡಿದ ಪ್ಯಾಕೇಜ್ ನಲ್ಲಿ ಲಾಕ್ ಡೌನ್ ಪರಿಣಾಮವಾಗಿ ಸಂಕಷ್ಟಕ್ಕೀಡಾದ ವಕೀಲರಿಗೆ ಸರ್ಕಾರ ಯಾವುದೇ ರೀತಿಯ ಹಣಕಾಸಿನ ಸಹಾಯ ನೀಡಿಲ್ಲ. ವಕೀಲರಿಗೆ ಸಹಾಯಕವಾಗುವಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೂ ಕೂಡಾ ಯಾವುದೇ ರೀತಿಯ ಹಣಕಾಸು ಅನುದಾನ ಒದಗಿಸಿಲ್ಲ.
ಕಳೆದ ವರ್ಷವೂ ಕೆಲವೇ ದಿನಗಳು ಮಾತ್ರ ಕಲಾಪಗಳು ನಡೆದವು. ಅಲ್ಲದೇ ಅಧಿವಿಚಾರಣಾ ನ್ಯಾಯಾಲಯಗಳಲ್ಲಿ ದಿನಕ್ಕೆ 20-30 ಪ್ರಕರಣಗಳನ್ನು ಮಾತ್ರ ನಡೆಸುವುದಕ್ಕೆ ನಿರ್ಧರಿಸಲಾಗಿತ್ತು. ಈ ವರ್ಷವೂ ಹಲವು ಷರತ್ತುಗಳ ಹಾಗೂ ನಿರ್ಬಂಧಗಳ ಅನ್ವಯ ನ್ಯಾಯಾಲಯದ ಕಾರ್ಯಕಲಾಪಗಳು ನಡೆಯುತ್ತಿದ್ದವು. ಈ ಎರಡನೇ ಅಲೆ ಪರಿಣಾಮವಾಗಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದೆ. ಇದರಿಂದ ಕಲಾಪಗಳು ನಡೆಯದೆ ಯುವ ವಕೀಲರು ಸಂಕಷ್ಟದಲ್ಲಿದ್ದಾರೆ.
ಕಳೆದ ಬಜೆಟ್ ನಲ್ಲಿ ಕೂಡಾ ವಕೀಲರಿಗಾಗಿ ಯಾವುದೇ ಯೋಜನೆ ರೂಪಿಸಿರಲಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಕೂಡ ಸರ್ಕಾರ ವಕೀಲರ ಸಮುದಾಯವನ್ನು ಕಡೆಗಣಿಸುತ್ತಲೇ ಬಂದಿದೆ. ಸಧ್ಯದ ಪರಿಸ್ಥಿತಿಯಲ್ಲಿ ವಕೀಲರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಸರ್ಕಾರ ವಕೀಲರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು.
ವಕೀಲರು ಕೂಡ ಸಾರ್ವಜನಿಕರ ಸಂಪರ್ಕದಲ್ಲಿರುವುದರಿಂದ ಕೆಲವು ವಕೀಲರು ಹಾಗೂ ಸಿಬ್ಬಂದಿ ಕೋವಿಡ್ ಬಾದಿತರಾಗಿ ಪ್ರಾಣ ಕಳೆದ್ಕೊಂಡಿದ್ದಾರೆ. ಪ್ರಾಣ ಕಳೆದುಕೊಂಡವರ ಕುಟುಂಬದವರು ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ.
ವಕೀಲರ ಹಿತ ಕಾಯಲು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ 100 ಕೋಟಿ ರೂ ಹಣಕಾಸಿನ ಸಹಾಯ ನೀಡಲು ಅಖಿಲ ಭಾರತ ವಕೀಲರ ಒಕ್ಕೂಟ ಕರ್ನಾಟಕ ರಾಜ್ಯ ಸಮಿತಿ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ಅವರು ತಿಳಿಸಿದ್ದಾರೆ.