ನಗರದ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ನಡೆದ ಕುವೆಂಪು ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅನಂತಾರಾಮ್ ಮಾತನಾಡಿದರು.
ವಿಶ್ವ ಕವಿ, ಜಗದ ಕವಿ ಮತ್ತು ಯುಗದ ಕವಿ ಕುವೆಂಪು ಅವರು ಜಗತ್ತಿಗೆ ವಿಶ್ವ ಮಾನವ ತತ್ವ ಸಾರುವ ಮೂಲಕ ಎಲ್ಲರಲ್ಲೂ ಸಂಘಿಕ ಪ್ರಜ್ಞೆ ಮೂಡಿಸಿದ್ದಾರೆ. ಇವರ ತತ್ವ ಆದರ್ಶವನ್ನು ಮೈಗೊಡಿಸಿಕೊಂಡರೆ ಸಮಾಜದಲ್ಲಿನ ಅಶಾಂತಿ ತೊಲಗುತ್ತದೆ ಎಂದು ಅವರು ತಿಳಿಸಿದರು.
ಸರ್ವಧರ್ಮ ಸಮನ್ವಯತೆ ಜಗಕ್ಕೆ ಸಾರಿದ ಮೇರು ಕವಿ ಕುವೆಂಪು. ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಹಾಗೂ ಸಾಹಿತ್ಯದ ಮೂಲಕ ವೈಚಾರಿಕ ಕ್ರಾಂತಿಗೆ ಬೆಳಕು ಚೆಲ್ಲಿದ ರಾಷ್ಟ್ರಕವಿ ಕುವೆಂಪು ಅವರ ಕಥೆ, ಕಾದಂಬರಿ, ನಾಟಕ, ಕವಿತೆಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡುವಂತಾಗಬೇಕು. ಕುವೆಂಪು ಅವರ ಕೃತಿಗಳನ್ನು ಓದುವ ಮೂಲಕ ಅವರಿಗೆ ಗೌರವ ಸಲ್ಲಿಸೋಣ ಎಂದರು.
ವಿಶ್ವ ಮಾನವ ಕುವೆಂಪು ಸಾಮಾಜಿಕ ವ್ಯವಸ್ಥೆಯಲ್ಲಿ ಆಡಂಬರವನ್ನು ವಿರೋಧಿಸಿದರು. ಮಂತ್ರ ಮಾಂಗಲ್ಯ ಮೂಲಕ ಸರಳ ವಿವಾಹಕ್ಕೆ ಒತ್ತು ನೀಡಿದರು. ವರ್ಣಾಶ್ರಮ ಹಾಗೂ ಮತ ಪದ್ಧತಿ ಹೋಗಲಾಡಿಸಲು ತಮ್ಮ ಕವಿತೆ ಕಾದಂಬರಿಗಳ ಮೂಲಕ ಸಂದೇಶ ಸಾರಿದರು. ಕರ್ನಾಟಕ ವೈಚಾರಿಕ ವಲಯದ ಸಾಕ್ಷಿ ಪ್ರಜ್ಞೆಯಂತ್ತಿದ್ದ ಕುವೆಂಪು ಅವರು ಕನ್ನಡ ನಾಡು-ನುಡಿ ಕಟ್ಟುವ ಕಾಯಕದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.
ಕುವೆಂಪು ಅವರು ಕನ್ನಡ ನಾಡಿನ ಕವಿ, ಸಾಹಿತಿ, ಚಿಂತಕರಾಗಿ ಬೆಳೆದು ವಿಶ್ವ ಮಾನವರಾಗಿದ್ದಾರೆ, ಕುವೆಂಪು ಅವರ ವೈಚಾರಿಕತೆಯು ಸಾಮಾಜಿಕ ಕಾಳಜಿಗಳ ಫಲವಾಗಿ ಮೂಡಿ ಬಂದಿದೆ. ಓ ನನ್ನ ಚೇತನ, ನಾಡಗೀತೆ, ರೈತಗೀತೆ, ಮಲೆಗಳಲ್ಲಿ ಮದುಮಗಳು ಮತ್ತಿತರ ಕಾದಂಬರಿ, ಕವಿತೆಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ ಎಂದರು.
ಶಿರಸ್ತೆದಾರ್ ಮಂಜುನಾಥ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸುಬ್ಬರೆಡ್ಡಿ, ಒಕ್ಕಲಿಗ ಸಂಘದ ಜೆ.ಎಸ್.ವೆಂಕಟಸ್ವಾಮಿ, ಬಿ.ನಾರಾಯಣಸ್ವಾಮಿ ಹಾಜರಿದ್ದರು.