ಲಾಕ್ಡೌನ್ ಕಾರಣದಿಂದ ಹಲವಾರು ಹಳ್ಳಿಗಳಲ್ಲಿ ಯುವಕರು ಕೆಲಸವಿಲ್ಲದೆ ಏನು ಮಾಡುವುದೆಂದು ತೋಚದೆ ಚಡಪಡಿಸುತ್ತಿರುವ ಸಮಯದಲ್ಲಿ ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಯುವಕರು ಸುಮ್ಮನೇ ಇರದೆ ತಮ್ಮ ಗ್ರಾಮದ ಕಳೆ ಗಿಡಗಳು, ಮುಳ್ಳುಗಿಡಗಳು ತುಂಬಿಕೊಂಡಿದ್ದ ಕುಂಟೆಯನ್ನು ಶುಚಿಗೊಳಿಸಲು ಮುಂದಾಗಿದ್ದಾರೆ.
ಕುಂದಲಗುರ್ಕಿ ಗ್ರಾಮದಲ್ಲಿನ ವಾಲ್ಮೀಕಿ ನಗರದ ಬಳಿಯ ನೀರಿನ ಕುಂಟೆ ಸುತ್ತ ಕಳೆ ಗಿಡಗಳು, ಮುಳ್ಳು ಕಂಟಿಗಳು, ಲಾಂಟಾನಾ ಪೊದೆಗಳು ಬೆಳೆದಿದ್ದವು. ನೀರು ಪಾಚಿ ಕಟ್ಟಿಕೊಂಡಿತ್ತು. ಸುಮಾರು ಇಪ್ಪತ್ತು ಮಂದಿ ಗ್ರಾಮದ ಯುವಕರು ಗ್ರಾಮದ ಕುಂಟೆಯ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದು, ಇವರನ್ನು ಕಂಡು ಇತರ ಗ್ರಾಮಸ್ಥರೂ ಸ್ವಚ್ಛತಾ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ.
“ಗ್ರಾಮ ಪಂಚಾಯಿತಿಯ ವತಿಯಿಂದ ಸುಮಾರು ಹತ್ತು ವರ್ಷದಿಂದ ಈ ಕುಂಟೆಯ ಪರಿಸರವನ್ನು ಸ್ವಚ್ಛತೆ ಮಾಡದೆ ಇರುವುದರಿಂದ ಗಿಡಗಂಟೆಗಳು ಆವರಿಸಿತ್ತು. ನೀರು ಕೂಡ ಪಾಚಿ ಕಟ್ಟಿ ಕಲುಷಿತವಾಗಿತ್ತು. ಹತ್ತಿರವೇ ಸರ್ಕಾರಿ ಪ್ರೌಢಶಾಲೆ ಮತ್ತು ಶುದ್ಧ ನೀರಿನ ಘಟಕವಿದೆ. ನರೇಗಾ ಕಾಮಗಾರಿಯ ಮೂಲಕವಾದರೂ ಸ್ವಚ್ಛತೆ ಆಗಬಹುದೆಂದು ಕಾದೆವು, ಪ್ರಯೋಜನವಾಗಲಿಲ್ಲ. ಇವರು ಹೇಗಿದ್ದರೂ ಸ್ವಚ್ಛತೆ ಮಾಡುವುದಿಲ್ಲ, ನಾವು ಹೇಗಿದ್ದರೂ ಬಿಡುವಾಗಿದ್ದೇವೆ. ಹಳ್ಳಿಗೆ ಅನುಕೂಲವಾಗುವ ಈ ಕೆಲಸವನ್ನು ಮಾಡೋಣವೆಂದು ಸ್ವಚ್ಛತೆ ಕಾರ್ಯಕ್ಕೆ ಮುಂದಾದೆವು” ಎನ್ನುತ್ತಾರೆ ಈ ಯುವಕರು.
“ಯುವಜನತೆ ಮನಸ್ಸು ಮಾಡಿದರೆ ಗ್ರಾಮಾಭಿವೃದ್ಧಿಯೂ ಆಗುತ್ತದೆ, ನಾಡಿನ ಅಭಿವೃದ್ಧಿಯೂ ಆಗುತ್ತದೆ. ಇತರರಿಗೆ ಮಾದರಿಯಾಗುವ ಹಾಗೆ ನಮ್ಮ ಹಳ್ಳಿಯ ಯುವಕರು ಗಲೀಜಾಗಿದ್ದ, ಮುಳ್ಳುಕಂಪೆಗಳಿಂದ ಆವೃತವಾಗಿದ್ದ ಕುಂಟೆಯನ್ನು ಪುನರುಜ್ಜೀವಗೊಳಿಸಿದ್ದಾರೆ” ಎಂದು ಕುಂದಲಗುರ್ಕಿ ಮುನೀಂದ್ರ ತಿಳಿಸಿದರು.