Kundalagurki, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯಿತಿಯ (Grama Panchayat) ಸಭಾಂಗಣದಲ್ಲಿ ಗುರುವಾರ ಗ್ರಾಮ ಕಾಯಕ ಮಿತ್ರರ ಕ್ಷೇತ್ರ ಭೇಟಿಯ ತರಬೇತಿಯ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ನರೇಗಾ ಕಾಮಗಾರಿಗಳಾದ ಅಮೃತ ಸರೋವರ ಕೆರೆ ಅಭಿವೃದ್ಧಿ ಕಾಮಗಾರಿ, ಉದ್ಯಾನವನ, ಶಾಲಾಭಿವೃದ್ಧಿ, ಇಂಗು ಗುಂಡಿ, ಮನೆ ಮನೆ ಭೇಟಿ ಮಾಡಿ ನರೇಗಾ (MGNREGS) ಯೋಜನೆಯಡಿ ಬರುವ ವೈಯಕ್ತಿಕ ಹಾಗೂ ಸಮುದಾಯಿಕ ಕಾಮಗಾರಿಗಳ ಬಗ್ಗೆ ಕಾಯಕ ಮಿತ್ರರಿಗೆ ಕ್ಷೇತ್ರ ಭೇಟಿ ತರಬೇತಿ ನೀಡಲಾಯಿತು.
ಕ್ಷೇತ್ರ ಭೇಟಿ ತರಬೇತಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು ಮಾತನಾಡಿ, ಕಾಯಕಮಿತ್ರರು ತಮ್ಮ ಗ್ರಾಮದ ಸ್ಧಳೀಯರಿಗೆ ನರೇಗಾ ಯೋಜನೆಗಳ ಕುರಿತು ಮಾಹಿತಿ ನೀಡಬೇಕು. ಗ್ರಾಮೀಣ ಪ್ರದೇಶದ ಬಡ ಜನರು ಸ್ವಲ್ಪ ಮಟ್ಟಿಗಾದರು ಆರ್ಥಿಕವಾಗಿ ಸಬಲರಾಗುವಂತೆ ಪ್ರೇರಣೆ ನೀಡುವ ಉದ್ದೇಶದಿಂದ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಬರುವ ಕಾಮಗಾರಿಗಳು ಜನರ ಮನೆ ಬಾಗಿಲಿಗೆ ತಲುಪಿಸುವಂತೆ ಕರೆ ನೀಡಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ಚಂದ್ರಪ್ಪ ಮಾತನಾಡಿ, ಗ್ರಾಮ ಕಾಯಕ ಮಿತ್ರರು ತಮ್ಮ ಗ್ರಾಮ ಪಂಚಾಯತಿಯ ಮನೆಗಳಿಗೆ ಭೇಟಿ ನೀಡಿ ಮಹಾತ್ಮಗಾಂಧಿ ನರೇಗಾ ಯೋಜನೆ ಕುರಿತು ಅರಿವು ಮೂಡಿಸಿ ಯೋಜನೆಯ ಕಾಮಗಾರಿಗಳಲ್ಲಿ ಕೆಲಸ ಮಾಡಲು ಪ್ರೇರೇಪಿಸಬೇಕು ಎಂದರು.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಉದ್ಯೋಗ ಚೀಟಿ ಬಯಸುವ ಜನರಿಂದ ನಮೂನೆ-1 ರಲ್ಲಿ ಅರ್ಜಿಗಳನ್ನು ಸ್ವೀಕರಿಸುವುದು, ಸ್ವೀಕೃತಿ ನೀಡುವುದು ಮತ್ತು ಉದ್ಯೋಗ ಚೀಟಿ ದೊರಕಿಸಿಕೊಡುವುದು. ಯೋಜನೆಯಡಿ ಕೆಲಸ ಮಾಡಲು ಬಯಸುವ ಕೂಲಿಕಾರರಿಂದ ನಮೂನೆ-6 ರಲ್ಲಿ ಕೆಲಸದ ಬೇಡಿಕೆ ಸ್ವೀಕರಿಸುವುದು, ಗ್ರಾಮ ಪಂಚಾಯತಿಯಿಂದ ಸ್ವೀಕೃತಿ ದೊರಕಿಸಿಕೊಡುವುದು ಮತ್ತು ನಿಗದಿತ ಕಾಲಮಿತಿಯೊಳಗೆ ಕೆಲಸ ದೊರೆಯುವಂತೆ ನೋಡಿಕೊಳ್ಳುವುದು. ಗ್ರಾಮ ಕಾಯಕ ಮಿತ್ರರು ನೇಮಕವಾದ ನಂತರದಲ್ಲಿ ಅನುಷ್ಠಾನಗೊಳಿಸಲಾದ ಕಾಮಗಾರಿಗಳ ಕಡತ ಮತ್ತು 7 ರಿಜಿಸ್ಟರ್‌ಗಳನ್ನು ನಿರ್ವಹಿಸುವುದು.
ಜಾಬ್‌ಕಾರ್ಡ್‌ಗಳಲ್ಲಿ ಕೂಲಿಕಾರರು ಕೆಲಸ ನಿರ್ವಹಿಸಿದ ವಿವರಗಳನ್ನು ಅಪ್‌ಡೇಟ್ ಮಾಡುವುದು. ನರೇಗಾ ಯೋಜನೆಗೆ ಸಂಬಂಧಿಸಿದ ಪೋಸ್ಟರ್‌ಗಳನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಅಂದರೆ ಬಸ್ ನಿಲ್ದಾಣ, ಶಾಲೆಗಳು, ಅಂಗನವಾಡಿ ಕೇಂದ್ರಗಳು, ಹಾಲು ಉತ್ಪಾದಕರ ಸಂಘಗಳು, ರೈತ ಸೇವಾ ಕೇಂದ್ರ, ನ್ಯಾಯ ಬೆಲೆ ಅಂಗಡಿ ಮುಂತಾದ ಸ್ಥಳಗಳಲ್ಲಿ ಪ್ರದರ್ಶಿಸುವುದು. ಪ್ರತಿ ತಿಂಗಳು ಕನಿಷ್ಠ 2 ರೋಜ್‌ಗಾರ್ ದಿನಾಚರಣೆ ಆಯೋಜಿಸುವುದು. ತಿಂಗಳಲ್ಲಿ ಕನಿಷ್ಠ ಒಂದು ಬಾರಿ ಸ್ವ-ಸಹಾಯ ಸಂಘಗಳ ಸದಸ್ಯರ ಸಭೆಯನ್ನು ಆಯೋಜಿಸಿ ಅವರಿಗೆ ನರೇಗಾ ಯೋಜನೆಯ ಕುರಿತು ಮಾಹಿತಿ ನೀಡಿ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವುದು. ಪ್ರತಿ ತಿಂಗಳು ಕಾಯಕ ಬಂಧುಗಳ ಸಭೆ ನಡೆಸುವುದು ಮತ್ತು ಅವರ ಕಾರ್ಯನಿರ್ವಹಣೆ ಮೇಲ್ವಿಚಾರಣೆ ಮಾಡುವುದು. ಕಾಮಗಾರಿ ಸ್ಥಳಗಳಲ್ಲಿ ಕೆಲಸಕ್ಕೆ ಹಾಜರಿರುವ ಕೂಲಿಕಾರರ ಮಾಹಿತಿಯನ್ನು ಪ್ರತಿದಿನ ಕಾಯಕಬಂಧುಗಳಿಂದ ಸಂಗ್ರಹಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿರವರಿಗೆ ಸಲ್ಲಿಸುವುದರ ಬಗ್ಗೆ ತರಬೇತಿ ನೀಡಲಾಯಿತು.
ಚಿಕ್ಕಬಳ್ಳಾಪುರ ತಾಲ್ಲೂಕಿನ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ರಫೀಕ್, ತ್ರಿಭುವನೇಶ್ವರಿ, ಮಧು, ಕುಂದಲಗುರ್ಕಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ತರಬೇತಿದಾರರು, ಗ್ರಾಮ ಪಂಚಾಯಿತಿಯ ಸಿಬ್ಬಂದಿ ಸೇರಿದಂತೆ ಚಿಂತಾಮಣಿ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕಿನ ಕಾಯಕಮಿತ್ರರು ಹಾಜರಿದ್ದರು.