Sidlaghatta : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ “ಶಕ್ತಿ” ಯೋಜನೆಯನ್ನು ಈ ಕ್ಷೇತ್ರದ ಎಲ್ಲ ಮಹಿಳೆಯರು ಸದುಪಯೋಗಪಡಿಸಿಕೊಳ್ಳಿ, ಕೆಲಸ ಕಾರ್ಯಗಳ ನಿಮಿತ್ತ ಸಾರಿಗೆ ಬಸ್‌ಗಳಲ್ಲಿ ಸಂಚರಿಸುವ ಎಲ್ಲ ಮಹಿಳೆಯರಿಗೂ ಈ ಯೋಜನೆ ಅನುಕೂಲ ಆಗಲಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ಕೆ.ಎಸ್.ಆರ್.ಟಿ.ಸಿ ಸಾರಿಗೆ ಬಸ್ ನಿಲ್ದಾಣದಲ್ಲಿ ರಾಜ್ಯದಲ್ಲಿ ಸಾರಿಗೆ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆಗೆ ಭಾನುವಾರ ಮಧ್ಯಾಹ್ನ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದ ಉದ್ದಗಲಕ್ಕೂ ಕೆ.ಎಸ್.ಆರ್.ಟಿ.ಸಿ ಯ ಸಾರಿಗೆ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಇಂದಿನಿಂದ ಪ್ರಯಾಣಿಸಬಹುದಾಗಿದೆ. ಇದರಿಂದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿನಿಯರು, ಕೆಲಸ ಕಾರ್ಯಗಳಿಗೆ ತೆರಳುವ ಮಹಿಳೆಯರಿಗೂ ಸಾಕಷ್ಟು ಅನುಕೂಲ ಆಗಲಿದೆ.
ಇಂತಹ ಮಹತ್ತರ ಯೋಜನೆಯನ್ನು ಜಾರಿಗೆ ತಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳನ್ನು ತಿಳಿಸಿದರು.
ಹಾಗೆಯೆ ಈ ಯೋಜನೆಯ ಉಪಯೋಗ ಎಲ್ಲರಿಗೂ ಸಿಗಬೇಕೆಂದರೆ, ಕ್ಷೇತ್ರದಲ್ಲಿ ಎಲ್ಲ ಮಾರ್ಗಗಳಲ್ಲೂ ಶಾಲಾ ಕಾಲೇಜು, ಕಚೇರಿಗಳಿಗೆ ತೆರಳುವವರಿಗೆ ಹಾಗೂ ಕೆಲಸ ಕಾರ್ಯಗಳ ನಿಮಿತ್ತ ತಾಲ್ಲೂಕು ಕೇಂದ್ರ, ಜಿಲ್ಲಾ ಕೇಂದ್ರಕ್ಕೆ ತೆರಳುವವರಿಗಾಗಿ ಸೂಕ್ತ ಸಮಯಕ್ಕೆ ಬಸ್ ವ್ಯವಸ್ಥೆ ಮಾಡಬೇಕು ಎಂದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಸೂಚಿಸಿದರು.
ಕ್ಷೇತ್ರದಲ್ಲಿ ಯಾವ ಮಾರ್ಗಗಳಲ್ಲಿ ಬಸ್ ಸಂಚಾರದ ಕೊರತೆ ಇದೆಯೋ ಅಂತಹ ಮಾರ್ಗಗಳನ್ನು ಆಧ್ಯತೆ ಹಾಗೂ ಅಗತ್ಯದ ಮೇರೆಗೆ ಕೂಡಲೆ ಬಸ್ ಸಂಚಾರವನ್ನು ಆರಂಭಿಸಬೇಕೆಂದು ಸಾರ್ವಜನಿಕರ ಪರವಾಗಿ ಶಾಸಕರು ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಸಿಂಗಾರಗೊಂಡಿದ್ದ ಸಾರಿಗೆ ಬಸ್.ಗೆ ಹಸಿರು ಬಾವುಟ ತೋರುವ ಮೂಲಕ ಶಕ್ತಿ ಯೋಜನೆಯ ಬಸ್‌ಗೆ ಚಾಲನೆ ನೀಡಿದರು. ಎಲ್ಲ ಮಹಿಳೆಯರಿಗೂ ಶುಭ ಕೋರಿದರು.
ನಗರಸಭೆ ಅಧ್ಯಕ್ಷೆ ಸುಮಿತ್ರರಮೇಶ್, ತಹಶೀಲ್ದಾರ್ ಬಿ.ಎನ್.ಸ್ವಾಮಿ, ಇಒ ಮುನಿರಾಜು, ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್, ಕೆ.ಎಸ್.ಆರ್.ಟಿ.ಸಿ ಘಟಕದ ವ್ಯವಸ್ಥಾಪಕ ಬಿ.ಶ್ರೀನಾಥ್, ಅಂಕಿ ಅಂಶ ಅಧಿಕಾರಿ ಜೆ.ವಿ.ಶ್ರೀಧರ್, ಸಹಾಯಕ ಸಂಚಾರ ನಿರೀಕ್ಷಕ ಸಿ.ವಿ.ಆಂಜನೇಯರೆಡ್ಡಿ, ಮುಖಂಡರಾದ ಬಂಕ್ ಮುನಿಯಪ್ಪ, ಹುಜಗೂರು ರಾಮಯ್ಯ, ಕೆ.ಎಸ್.ಮಂಜುನಾಥ್, ತಾದೂರು ರಘು ಹಾಜರಿದ್ದರು.