ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿಯ ಡೇರಿಯಲ್ಲಿ ಉಭಯ ಜಿಲ್ಲೆಗಳಲ್ಲಿಯೆ ಮೊದಲಿಗೆ 5 ಸಾವಿರ ಲೀಟರ್ ಸಾಮರ್ಥ್ಯದ ಬಿಎಂಸಿ ಕೇಂದ್ರವನ್ನು ಸ್ಥಾಪಿಸಿದ್ದು ಅದನ್ನು ವೀಕ್ಷಿಸಿ ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ, ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು.
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಬೇರ್ಪಡಿಸುವುದು ಸುಲಭ. ಆದರೆ ಅದರಿಂದಾಗುವ ಆಗು ಹೋಗುಗಳ ಬಗ್ಗೆ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಇನ್ನಷ್ಟು ಅಧ್ಯಯನ ನಡೆಸಬೇಕು. ಆ ನಂತರ ಬೇರ್ಪಡಿಸಬೇಕಾ ಅಥವಾ ಹೀಗೆಯೆ ಮುಂದುವರೆಸುವುದಾ ಎನ್ನುವುದನ್ನು ನಿರ್ಧರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಮೈಸೂರು ಒಕ್ಕೂಟದಿಂದ ಚಾಮರಾಜನಗರ ಒಕ್ಕೂಟ ಪ್ರತ್ಯೇಕವಾದಾಗ ಎಲ್ಲರೂ ಸಂತಸಪಟ್ಟರು. ಆದರೆ ನಂತರ ಅಲ್ಲಿ ಒಕ್ಕೂಟದ ಸಿಬ್ಬಂದಿಗೆ ಬಟವಾಡೆ ಮಾಡಲು ಸಹ ಹಣ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಗಮನಿಸಬೇಕು.
ಇದೀಗ ಕೊರೊನಾದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು ಅವರ ಮೇಲೆ ಇಂತಹ ಪರಿಸ್ಥಿತಿಯಲ್ಲಿ ಪ್ರಯೋಗ ಮಾಡುವುದು ಸರಿಯಲ್ಲ. ಕೋಲಾರದಲ್ಲಿ ಒಕ್ಕೂಟವಿದ್ದರೂ ಚಿಕ್ಕಬಳ್ಳಾಪುರಕ್ಕೆ ಏನೂ ಅನ್ಯಾಯವಾಗಿಲ್ಲ ಎಂದರು.
220 ಕೋಟಿ ರೂ.ವೆಚ್ಚದಲ್ಲಿ ಮೆಗಾ ಡೇರಿ ನಿರ್ಮಾಣವಾಗಿದೆ. 102 ಕೋಟಿ ರೂ.ವೆಚ್ಚದಲ್ಲಿ ಶಿಡ್ಲಘಟ್ಟದ ಸಾದಲಿಯ ಬಳಿ ಪಶು ಆಹಾರ ಘಟಕ ನಿರ್ಮಾಣವಾಗಲಿದೆ. ಈಗಾಗಲೆ ಸಾದಲಿಯಲ್ಲಿ ಶೀಥಲೀಕರಣ ಕೇಂದ್ರವನ್ನು ಮುಚ್ಚದೆ ಅಲ್ಲಿನ ಸಿಬ್ಬಂದಿ ಅಕಾರಿಗಳ ಹಿತದೃಷ್ಟಿಯಿಂದ ಹಾಲಿನ ಪ್ಯಾಕೆಟ್‌ಗಳ ತಯಾರಿಕೆ ಘಟಕವನ್ನು ಮುಂದುವರೆಸಲಾಗಿದೆ ಎಂದು ವಿವರಿಸಿದರು.
ಎಂ.ವಿ.ಕೃಷ್ಣಪ್ಪ ಹೆಸರಲ್ಲಿ ಕೋಲಾರದಲ್ಲಿ ಮೆಗಾ ಡೇರಿ ನಿರ್ಮಾಣ ಮಾಡುವ ಈ ಹಂತದಲ್ಲೆ ಒಕ್ಕೂಟವನ್ನು ಬೇರ್ಪಡಿಸುವುದು ಬೇಡ, ಈ ಬಗ್ಗೆ ಸದನದಲ್ಲಿಯೂ ಪ್ರಸ್ತಾಪ ಮಾಡಿ ಒಕ್ಕೂಟವನ್ನು ಮುಂದುವರೆಸುವ ಬಗ್ಗೆ ಮುಖ್ಯ ಮಂತ್ರಿಗಳ ಮನವೊಲಿಕೆ ಮಾಡುತ್ತೇವೆಂದರು.
ಶಾಸಕ ವಿ.ಮುನಿಯಪ್ಪ, ಕೋಚಿಮುಲ್ ನಿರ್ದೆಶಕ ಆರ್. ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಕೋಚಿಮುಲ್ ವ್ಯವಸ್ಥಾಪಕ ಎಂ.ಕೆಂಪರಾಜು, ಶ್ರೀನಿವಾಸ್, ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಬಿ.ವಿ.ಚಂದ್ರಶೇಖರ್, ಮಳಮಾಚನಹಳ್ಳಿ ಡೇರಿ ಅಧ್ಯಕ್ಷ ಪ್ರಕಾಶ್ ಹಾಜರಿದ್ದರು.