ಶಿಡ್ಲಘಟ್ಟ ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಕೋಚಿಮುಲ್ ಮಾಜಿ ನಿರ್ದೇಶಕ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಸೇವಾ ಕಾರ್ಯ ಶ್ಲಾಘನೀಯವಾದರೂ, ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 15 ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಒಕ್ಕೂಟವೂ ಹಾಲು ಉತ್ಪಾದಕರ ಪ್ರಗತಿಯ ದೃಷ್ಟಿ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಅಭಿವೃದ್ಧಿ ದೃಷ್ಟಿಯಿಂದ ಸ್ವತಂತ್ರ ಅಸ್ಥಿತ್ವವನ್ನು ಹೊಂದಬೇಕು ಎಂದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಿಂದ ಬೇರ್ಪಡಿಸಿ ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಸ್ಥಾಪನೆ ಮಾಡಲೇಬೇಕು. ಜಿಲ್ಲಾ ಭೌಗೋಳಿಕ ಕಾರ್ಯವ್ಯಾಪ್ತಿಯಲ್ಲಿ ಆರು ತಾಲ್ಲೂಕುಗಳಿಂದ ಒಟ್ಟು 971 ಹಾಲು ಉತ್ಪಾದಕರ ಸಹಕಾರ ಸಂಘಗಳು ಇದ್ದು, ಪ್ರತಿ ದಿನ 4.5 ಲಕ್ಷ ಲೀಟರ್ ಹಾಲು ಸಂಗ್ರಹಣೆ ನಡೆಯುತ್ತಿದೆ. ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಸ್ಥಾಪನೆ ಮಾಡುವುದರಿಂದ ಸಾಗಾಣಿಕಾ ವೆಚ್ಚ ತಗ್ಗುತ್ತದೆ, ಈ ಭಾಗದ ರೈತರಿಗೆ ಹೆಚ್ಚಿನ ಅನಿಕೂಲವಾಗುವುದರ ಜೊತೆಗೆ ನಮ್ಮ ಭಾಗದ ರೈತರ ಆರ್ಥಿಕ ಅಭಿವೃದ್ಧಿ ಆಗುತ್ತದೆ ಎಂದು ಅವರು ತಿಳಿಸಿದರು.
ನಂದಿ ಕ್ರಾಸ್ ಬಳಿ ಸುಸಜ್ಜಿತ ಮೆಗಾ ಡೈರಿಯು ಸ್ಥಾಪನೆಯಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಾಗಿ 14 ವರ್ಷಗಳು ಸಂದಿದ್ದರೂ ಸಹಾ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಸ್ಥಾಪನೆಯಾಗದೆ ಒಂದು ರೀತಿಯಲ್ಲಿ ರೈತರ ಪ್ರಗತಿಗೆ ಹಿನ್ನಡೆಯಾಗಿದೆ. ಜಿಲ್ಲೆಯಲ್ಲಿ ಅಗತ್ಯ ಸೌಲಭ್ಯಗಳು ಇರುವುದರಿಂದ ಕೋಲಾರದ ಒಕ್ಕೂಟದಿಂದ ಪ್ರತ್ಯೇಕಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಸ್ಥಾಪನೆಯಿಂದ ಜಿಲ್ಲೆಯ ಹಾಲು ಉತ್ಪಾದಕರಿಗೆ ಹೆಚ್ಚಿನ ಸಹಾಯ ಮತ್ತು ಸಹಕಾರ ಸಿಗುತ್ತದೆ. ಜಿಲ್ಲೆಯ ಪ್ರಮುಖ ನಾಯಕರು ಎಚ್ಚೆತ್ತುಕೊಂಡು ಸರ್ಕಾರದ ಮಟ್ಟದಲ್ಲಿ ಪ್ರಭಾವ ಬೀರಿ ಒಕ್ಕೂಟ ಅಸ್ತಿತ್ವಕ್ಕೆ ತರುವಲ್ಲಿ ಯಶಸ್ವಿಯಾಗಿರುವುದು ಅಭಿನಂದನೀಯವಾಗಿರುತ್ತದೆ.
ಕೋಲಾರ ಒಕ್ಕೂಟದಿಂದ ಜಿಲ್ಲೆಯನ್ನು ಬೇರ್ಪಡಿಸಲು ಇದು ಸೂಕ್ತವಾದ ಸಮಯವಾಗಿರುತ್ತದೆ. ಬಡತನ ರೇಖೆಯಿಂದ ಮತ್ತುಮಧ್ಯಮ ವರ್ಗದ ಜೀವನಾಡಿಯಾಗಿರುವ ಹೈನೋದ್ಯಮದಿಂದ ಜನರಿಗೆ ಹೆಚ್ಚಿನ ಆರ್ಥಿಕಾಭಿವೃದ್ಧಿಗೆ ನಾಂದಿಯಾಗುತ್ತದೆ. ಒಕ್ಕೂಟ ಸ್ಥಾಪನೆಗಾಗಿ ಜಿಲ್ಲೆಯಲ್ಲಿ ಅಗತ್ಯವಾಗಿರುವ ಸೂಕ್ತ ಸೌಲಭ್ಯಗಳು ಇರುವುದರಿಂದ ಚಿಕ್ಕಬಳ್ಳಾಪುರ ಜಿಲ್ಲಾ ಒಕ್ಕೂಟ ಸ್ಥಾಪನೆ ಮಾಡಲು ಜಿಲ್ಲಾ ಪ್ರಮುಖ ನಾಯಕರು, ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ಒಕ್ಕೂಟ ಸ್ಥಾಪನೆಗೆ ಅನುವು ಮಾಡಿಕೊಡಬೇಕೆಂದು ಜಿಲ್ಲಾ ಹಾಲು ಉತ್ಪಾದಕರ ಪರವಾಗಿ ವಿನಂತಿ ಮಾಡುತ್ತೇವೆ ಎಂದು ಹೇಳಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ನಾರಾಯಣಸ್ವಾಮಿ, ಸದಸ್ಯ ನಾರಾಯಣಸ್ವಾಮಿ, ಅಂಬರೀಷ್, ಕೆಂಪೇಗೌಡ, ಮುಗಿಲಡಿಪಿ ನಂಜಪ್ಪ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi