Kakachokkandahalli, Sidlaghatta : ದೇಶದ ಜನಸಂಖ್ಯೆಗೆ ಅನುಗುಣವಾಗಿ ಹಾಲಿಗೆ ಹೆಚ್ಚಿನ ಬೇಡಿಕೆ ಇದ್ದು ಹಾಲು ಉತ್ಪಾದಕರು ಒಳ್ಳೆಯ ಹಸುಗಳನ್ನು ಸಾಕಾಣಿಕೆ ಮಾಡುವ ಮೂಲಕ ಗುಣಮಟ್ಟದ ಹಾಲು ಉತ್ಪಾದನೆ ಮಾಡಲು ಹೆಚ್ಚಿನ ಗಮನಹರಿಸಿಬೇಕು ಎಂದು KMF ಹಾಗೂ KOCHIMUL ನಿರ್ದೇಶಕ ಆರ್.ಶ್ರೀನಿವಾಸ್ ಹೇಳಿದರು.
ತಾಲ್ಲೂಕಿನ ಕಾಕಚೊಕ್ಕಂಡಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಮೃತಭವನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕೋಲಾರ ಜಿಲ್ಲೆಯಲ್ಲಿ ಶೇಕಡ ೨೦ ರಿಂದ ೩೦ ರಷ್ಟು ಹಾಲು ಉತ್ಪಾದನೆ ಹೆಚ್ಚಾಗಿದೆ, ಕೋಲಾರ ಜಿಲ್ಲೆಗೆ ಹೋಲಿಸಿದರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ೧ ಲಕ್ಷ ೮೦ ಸಾವಿರ ಲೀಟರ್‌ನಷ್ಟು ಹಾಲು ಉತ್ಪಾದನೆ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಈ ಬಾಗದ ಹಾಲು ಉತ್ಪಾದಕರು ಮತ್ತಷ್ಟು ಹೆಚ್ಚು ಹಾಲು ಉತ್ಪಾದನೆಗೆ ಶ್ರಮಿಸಬೇಕು. ಹಾಗು ಪ್ರತಿಯೊಬ್ಬರೂ ಕಡ್ಡಾಯವಾಗಿ ರಾಸುಗಳ ವಿಮೆ ಮಾಡಿಸಿಕೊಳ್ಳಬೇಕೆಂದರು.
ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ಮಾತನಾಡಿ ಖಾಸಗಿ ಡೇರಿಗಳು ನೆಂಟರು ಇದ್ದಂತೆ ಇವತ್ತು ಇರುತ್ತಾರೆ ನಾಳೆ ಹೋಗ್ತಾರೆ, ಆದರೆ ರೈತರ ಸಂಸ್ಥೆಯಾಗಿರುವ ಕೋಚಿಮುಲ್ ಹಾಲು ಒಕ್ಕೂಟ ನಿಮ್ಮದು ಅದನ್ನು ಭದ್ರಗೊಳಿಸಲು ಸಹಕರಿಸಬೇಕೆಂದು ಮನವಿ ಮಾಡಿದರು. ಕೋಚಿಮಲ್ ಮೂಲಕ ಜಾರಿಗೊಳಿಸಿರುವ ಯೋಜನೆಗಳು ಮತ್ತು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃಧ್ಧಿ ಯೋಜನಾಧಿಕಾರಿ ಸುರೇಶ್‌ಗೌಡ, ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ರವಿಕಿರಣ್, ಎಂಪಿಸಿಎಸ್ ಅಧ್ಯಕ್ಷ ಕೆ.ಎನ್.ಬಾಬು, ಉಪಾಧ್ಯಕ್ಷೆ ನಾರಾಯಣಮ್ಮ, ಸಿಇಓ ನಾರಾಯಣಸ್ವಾಮಿ, ಕೋಮುಲ್ ವ್ಯವಸ್ಥಾಪಕ ಡಾ.ಚೇತನ, ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮುನೇಗೌಡ ಎಂಪಿಸಿಎಸ್ ನಿರ್ದೇಶಕರು ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.