Malamachanahalli, Sidlaghatta : ಹೈನುಗಾರಿಕೆಯನ್ನು ಉತ್ತೇಜಿಸುವ ಸಲುವಾಗಿ ಹಾಲು ಉತ್ಪಾದಕರಿಗೆ ಲೀಟರ್ ಹಾಲಿಗೆ 5 ರೂಗಳು ಪ್ರೋತ್ಸಾಹ ಧನ ನೀಡುವ ಯೋಜನೆ ದೇಶದಲ್ಲಿಯೇ ಇಲ್ಲ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾದರಿ ಯೋಜನೆಯನ್ನು ಅನುಷ್ಠಾನಗೊಳಿಸಿದೆ ಎಂದು ಕೆಎಂಎಫ್ ನಿರ್ದೇಶಕ ಶ್ರೀನಿವಾಸ ರಾಮಯ್ಯ ಹೇಳಿದರು.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಹಾಗೂ ಮೇಲಂತಸ್ತಿನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರ ನೆರವು ನೀಡುತ್ತಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಹಾಲಿನ ಪೌಡರ್ ದರವನ್ನು ಪರಿಷ್ಕರಿಸಲು ಈಗಾಗಲೇ ಸರ್ಕಾರವನ್ನು ಒತ್ತಾಯಿಸಿದ್ದು ಸರ್ಕಾರವೂ ಸಕರಾತ್ಮಕವಾಗಿ ಸ್ಪಂದಿಸಿದೆ. ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕ್ಷೀರಭಾಗ್ಯದಂತಹ ಮಕ್ಕಳಿಗೆ ಹಾಲು ನೀಡುವ ಯೋಜನೆಯನ್ನು ಜಾರಿಗೊಳಿಸಿದ್ದಾರೆ ಎಂದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆಯಲ್ಲಿ ಕೋಲಾರ ಜಿಲ್ಲೆ ಅಗ್ರಸ್ಥಾನವನ್ನು ಹೊಂದಿದೆ. ಆದರೂ ಸಹ ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಹಾಸನ ಜಿಲ್ಲೆಯಲ್ಲಿ ನಮಗಿಂತ 50 ಪೈಸಿ ಕಡಿಮೆ ದರ ನೀಡಿದರು ಸಹ 12 ಲಕ್ಷ ಹಾಲು ಲೀಟರ್ ಉತ್ಪಾದನೆ ಆಗುತ್ತಿದೆ. ಎಲ್ಲಋ ಪಶು ಸಂಗೋಪನೆ ಮಾಡಿ ಹೈನುಗಾರಿಕೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಸಾರ್ವಜನಿಕ ಮತ್ತು ಸಹಕಾರ ವ್ಯವಸ್ಥೆಯಲ್ಲಿರುವ ಪ್ರತಿಯೊಬ್ಬರು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ವ್ಯವಸ್ಥೆಯಲ್ಲಿ ಸುಧಾರಣೆ ಮತ್ತು ಬದಲಾವಣೆ ತರಲು ಸಾಧ್ಯ. ಕೆಎಂಎಫ್ ಮೂಲಕ 10 ಲಕ್ಷ ರೂಗಳು ಸೇರಿದಂತೆ ಮಳಮಾಚನಹಳ್ಳಿ ಎಂಪಿಸಿಎಸ್ ಕಟ್ಟಡ ನಿರ್ಮಿಸಲು ಒಟ್ಟು 15 ಲಕ್ಷ ರೂಗಳ ನೆರವು ಒದಗಿಸಲಾಗಿದೆ. ಸಂಘ ಅವಳಿ ಜಿಲ್ಲೆಯಲ್ಲಿ ಮಾದರಿಯಾಗಿ ಅಭಿವೃಧ್ಧಿ ಹೊಂದಲಿಯೆಂದು ಆಶಯ ವ್ಯಕ್ತಪಡಿಸಿದರು.
ಶಾಸಕ ಮೇಲೂರು ರವಿಕುಮಾರ್ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆಯ ದಿನೇ ದಿನೇ ಕಡಿಮೆಯಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಲು ಉತ್ಪಾದಕರಿಗೆ ಸೂಕ್ತ ರೀತಿಯಲ್ಲಿ ಪ್ರೋತ್ಸಾಹ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೊರರಾಜ್ಯಗಳಿಂದ ಹಾಲು ಖರೀದಿ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು.
ಈ ಸಮಾರಂಭದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಬಿ.ಬೈರೇಗೌಡ, ಬಿ.ಎನ್.ಕೃಷ್ಣಯ್ಯ, ಎಂ.ಸಿ.ಜಗದೀಶ್, ಎಂಪಿಸಿಎಸ್ ಅಧ್ಯಕ್ಷ ಎಂ.ಎಸ್.ಶ್ರೀನಿವಾಸಪ್ಪ, ಉಪಾಧ್ಯಕ್ಷ ಎಂ.ಜನಾರ್ಧನ್, ಸಿಇಓ ಎಂ.ವಿನಯ್‍ಕುಮಾರ್, ಎಸ್.ಎಫ್.ಸಿ.ಎಸ್ ಬ್ಯಾಂಕಿನ ಅಧ್ಯಕ್ಷ ಮುನೇಗೌಡ, ಕೋಚಿಮುಲ್ ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಡಾ.ಬಿ.ಆರ್.ರವಿಕಿರಣ್, ವಿಸ್ತರಣಾಧಿಕಾರಿ ವಿ.ಶ್ರೀನಿವಾಸ್, ಯುವ ಮುಖಂಡ ರವಿಕುಮಾರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಕೆ.ರಾಜಶೇಖರ್, ಜೆಡಿಎಸ್ ಮುಖಂಡ ತಾದೂರು ರಘು, ಎಂಪಿಸಿಎಸ್ ನಿರ್ದೇಶಕರಾದ ಜಿ.ಪ್ರಕಾಶ್, ಎಂ.ಎಲ್.ಲೋಕನಾಥ್,ಎಂ.ಎಚ್.ಹರೀಶ್, ಎಂ.ಸಿ.ರಾಜಶೇಖರ್, ಎಂ.ಎನ್.ರಾಮಚಂದ್ರಚಾರಿ, ಎಂ.ಟಿ.ನಾರಾಯಣಸ್ವಾಮಿ, ರಾಜಣ್ಣ, ಮುನಿರಾಜು, ಪ್ರಮೀಳಮ್ಮ ಹಾಜರಿದ್ದರು.