Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರಿನಲ್ಲಿ ಮಂಗಳವಾರ ಸಂಜೆ ಲೆಫ್ಟಿನೆಂಟ್ ಕರ್ನಲ್ ಸುನಿಲ್ ಕುಮಾರ್ (Lieutenant Colonel Sunil Kumar) ಅವರಿಗೆ ಕಸಾಪ (Kannada Sahitya Parishat) ವತಿಯಿಂದ ಗೌರವವನ್ನು ಸಲ್ಲಿಸಿ ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ (Dr. Kodi Rangappa) ಅವರು ಮಾತನಾಡಿದರು.
ರೈತ ಮತ್ತು ಸೈನಿಕ ದೇಶದ ಎರಡು ಕಣ್ಣುಗಳಿದ್ದಂತೆ. ಮುತ್ತೂರೆಂಬ ಸಣ್ಣ ಹಳ್ಳಿಯ ರೈತಾಪಿ ಹಿನ್ನೆಲೆಯಿಂದ ಬಂದು ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಸ್ಥಾನಕ್ಕೆ ಬೆಳೆದಿರುವ ಸುನಿಲ್ ಕುಮಾರ್ ಅವರು ಜಿಲ್ಲೆಯ ಅನರ್ಘ್ಯ ರತ್ನ. ನಮ್ಮ ಜಿಲ್ಲೆಯಲ್ಲಿ ಈ ರೀತಿಯ ಹಲವಾರು ಮುತ್ತುರತ್ನಗಳು ಹುಟ್ಟಬೇಕು. ಲೆಫ್ಟಿನೆಂಟ್ ಕರ್ನಲ್ ಸುನಿಲ್ ಕುಮಾರ್ ಅವರಿಂದ ಪ್ರೇರಣೆ ಪಡೆದು ಈಗಿನ ಮಕ್ಕಳು ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು ಎಂದು ಅವರು ತಿಳಿಸಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ನಮ್ಮ ಕಣ್ಣ ಮುಂದೆಯೇ ಕ್ಯಾಪ್ಟನ್ ಆಗಿದ್ದ ಸುನಿಲ್ ಕುಮಾರ್ ಅವರು ಮೇಜರ್ ಆದರು. ಇದೀಗ ಲೆಫ್ಟಿನೆಂಟ್ ಕರ್ನಲ್ ಆಗಿ ಪದೋನ್ನತಿಯನ್ನು ಪಡೆದಿದ್ದಾರೆ. ಎರಡು ಬಾರಿ ಸಿಯಾಚಿನ್ ಪ್ರದೇಶದಲ್ಲಿ ಕೆಲಸ ಮಾಡಿರುವ ಅಪರೂಪದ ಯೋಧ ಇವರು ಎಂದು ಹೇಳಿದರು.
ಲೆಫ್ಟಿನೆಂಟ್ ಕರ್ನಲ್ ಸುನಿಲ್ ಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಕಸಾಪ ವಿದ್ಯಾರ್ಥಿಗಳಿಗೆ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸೈನ್ಯವನ್ನು ಸೇರುವ ಬಗ್ಗೆ ಹಾಗೂ ಉತ್ತಮ ನಾಗರಿಕರಾಗುವ ಬಗ್ಗೆ ತಿಳಿಸುವೆ ಎಂದರು.
ಈ ಸಂದರ್ಭದಲ್ಲಿ ಕಸಾಪ ವತಿಯಿಂದ ಲೆಫ್ಟಿನೆಂಟ್ ಕರ್ನಲ್ ಸುನಿಲ್ ಕುಮಾರ್ ಹಾಗೂ ಅವರ ತಾಯಿ ವಿ.ವಿಜಯಲಕ್ಷ್ಮಿ ಮತ್ತು ತಂದೆ ವೆಂಕಟೇಶಮೂರ್ತಿ ಅವರನ್ನು ಗೌರವಿಸಲಾಯಿತು.
ಕಸಾಪ ಗೌರವ ಕಾರ್ಯದರ್ಶಿ ಅಮೃತ್ ಕುಮಾರ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಂ.ಜಯರಾಂ, ಕಸಾಪ ತಾಲ್ಲೂಕು ಘಟಕದ ಕೆ.ಮಂಜುನಾಥ್, ಎ.ಶಶಿಕುಮಾರ್, ಎ.ಎಂ.ತ್ಯಾಗರಾಜ್, ಬಿ.ನಾಗೇಶ್, ಎಸ್.ಸತೀಶ್, ಪುನೀತ್ ಕುಮಾರ್, ನಾಗೇಂದ್ರ, ಭಾಸ್ಕರ್, ಲಕ್ಷ್ಮೀನಾರಾಯಣ್ ಹಾಜರಿದ್ದರು.