Sidlaghatta : ಶಿಡ್ಲಘಟ್ಟ ನಗರದ ಎ.ಆರ್.ಎಂ.ಪಿ.ಯು ದ್ವಿತೀಯ ಪಿಯುಸಿ ವಿಭಾಗದ ವಿದ್ಯಾರ್ಥಿಗಳಿಗೆ ತಾಲ್ಲೂಕು ಕಸಾಪ ವತಿಯಿಂದ “ಮಯೂರ ವರ್ಮನ ಜೀವನ ಮತ್ತು ಸಾಧನೆಗಳು” ಪ್ರಬಂಧ ಸ್ಪರ್ಧೆಯನ್ನು ಶನಿವಾರ ಆಯೋಜಿಸಲಾಗಿತ್ತು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಬಹುಮಾನ ವಿತರಿಸಿ ಮಾತನಾಡಿ, ಬನವಾಸಿ ಕದಂಬರು ಹಳೆ ಕರ್ನಾಟಕದ ಮೊದಲ ರಾಜ ಮನೆತನವಾಗಿದೆ. ಆಗ ಆಡುನುಡಿಯಾದ ಕನ್ನಡವೇ ಆಡಳಿತ ನುಡಿಯಾಗಿತ್ತು. ಬನವಾಸಿಯು ಕನ್ನಡ ನಾಡಿನ ಮೊಟ್ಟಮೊದಲ ಆಡಳಿತದ ಪಟ್ಟಣವಾಗಿತ್ತು. ನಾಡನ್ನು ಕಟ್ಟಿದ ಮಯೂರವರ್ಮ, ಅವನ ಮುಂದಿನ ಪೀಳಿಗೆಯ ಆಡಳಿತದ ಹೊತ್ತಿನಲ್ಲಿ ಕದಂಬರು ಉತ್ತುಂಗಕ್ಕೇರಿದ್ದರು, ಅದೇ ರೀತಿಯಲ್ಲಿ ಕನ್ನಡ ನುಡಿಯನ್ನು ಉತ್ತುಂಗಕ್ಕೇರಿಸಿದ್ದರು ಎಂದರು.
ಮೊತ್ತಮೊದಲ ಕನ್ನಡದ ಕಲ್ಬರಹ “ಹಲ್ಮಿಡಿ ಶಾಸನ”ವನ್ನು ಕೆತ್ತಿಸಿದವರು ಕದಂಬರು. ಇದಲ್ಲದೇ ಕರ್ನಾಟಕದ ಮೂಲೆ ಮೂಲೆಗಳಲ್ಲಿ 50 ಕ್ಕೂ ಹೆಚ್ಚು ಕಲ್ಬರಹಗಳನ್ನು ಕನ್ನಡದಲ್ಲೇ ಕೆತ್ತಿಸಿದ್ದಾರೆ ಎಂದರು.
ಪ್ರಾಂಶುಪಾಲ ಕೆ.ಮೂರ್ತಿ ಸಾಮ್ರಾಟ್ ಮಾತನಾಡಿ, ಕರ್ನಾಟಕ ರಾಜ್ಯದ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ತಾಲ್ಲೂಕು ಕಸಾಪ , ನಮ್ಮನ್ನಾಳಿದ ರಾಜರುಗಳು ಮತ್ತು ಅವರು ಕೊಟ್ಟ ಕೊಡುಗೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿ ಅವರೆಲ್ಲರ ಹೋರಾಟ ಮತ್ತು ತ್ಯಾಗಗಳ ಬಗ್ಗೆ ಸ್ಮರಣೆ ಮಾಡುತ್ತಿದೆ ಎಂದರು.
ಪ್ರಬಂಧ ಸ್ಪರ್ಧೆ ವಿಜೇತರು: ಕಾವ್ಯಶ್ರೀ, ವೀಣಾ, ಸ್ವಾತಿ (ಪ್ರಥಮ), ರೂಪ, ನವ್ಯ, ಹರ್ಷಿತಾ(ದ್ವಿತೀಯ), ಹಂಸವೇಣಿ, ಭಾನುಪ್ರಿಯಾ, ಅನಿತಾ(ತೃತೀಯ). ತಾಲ್ಲೂಕು ಕಸಾಪ ವತಿಯಿಂದ ಪುಸ್ತಕ ಮತ್ತು ಪ್ರಮಾಣ ಪತ್ರ ನೀಡಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ನಿ.ಪೂ.ಅಧ್ಯಕ್ಷ ಎ. ಎಂ.ತ್ಯಾಗರಾಜ್, ಗಾಯಕ ದೇವರಮಳ್ಳೂರು ಮಹೇಶ್ ಕುಮಾರ್, ಶಾರದಾ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಶ್ರೀಕಾಂತ್, ಎ.ಆರ್.ಎಂ.ಪಿಯು ಕಾಲೇಜಿನ ಪ್ರಾಂಶುಪಾಲ ಕೆ.ಮೂರ್ತಿ ಸಾಮ್ರಾಟ್, ಉಪನ್ಯಾಸಕರಾದ ವಿ.ದೇವರಾಜ್ ಅರಸ್, ಸಿ.ನಾಗೇಶ್ ಮೌರ್ಯ, ಅನಿಲ್ ಕುಮಾರ್, ಕಲ್ಯಾಣ್, ಶ್ರೀಧರಮೂರ್ತಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.