ಶಿಡ್ಲಘಟ್ಟ ನಗರದ ಸಿದ್ಧಾರ್ಥನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಕಸಾಪ ವತಿಯಿಂದ ಡಾ.ಬಿ.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ರವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿದರು.
ಭೀಮರಾವ್ ರಾಮ್ ಜಿ ಅಂಬೇಡ್ಕರ್, ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರು. ಅಂಬೇಡ್ಕರ್ ಭಾರತದ ನೀರಾವರಿ ಯೋಜನೆಯ ಜನಕರಾಗಿದ್ದು, ಉತ್ತರ ಮತ್ತು ದಕ್ಷಿಣ ಭಾರತದ ನದಿಗಳ ಜೋಡಣೆಗೆ 1952 ರಲ್ಲಿಯೇ ಸಲಹೆ ನೀಡಿದ್ದರು. ಅಂದಿನ ಪ್ರಧಾನಿ ನೆಹರು ವಿದೇಶಿ ಗಣ್ಯರಿಗೆ ಪರಿಚಯಿಸುವಾಗ “ಡಾ.ಅಂಬೇಡ್ಕರ್ ನನ್ನ ಮಂತ್ರಿ ಮಂಡಲದ ವಜ್ರ” ಎನ್ನುತ್ತಿದ್ದರು ಎಂದು ಅವರು ತಿಳಿಸಿದರು.
ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು ಸಂವಿದಾನ ಶಿಲ್ಪಿ ಎಂದು ಕರೆಯುತ್ತಾರೆ. ಇವರ ಸೇವೆಯನ್ನು ಸ್ಮರಿಸಿ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ (ಮರಣೋತ್ತರ) ನೀಡಿ ಗೌರವಿಸಿದೆ. ಜಗತ್ತನ್ನು ಬದಲಿಸಲು ಬಳಸಿಕೊಳ್ಳ ಬಹುದಾದ ಅತ್ಯಂತ ಪ್ರಭಲವಾದ ಅಸ್ತ್ರ ಎಂದರೆ ಶಿಕ್ಷಣ. ಪುಸ್ತಕಗಳು ಇಲ್ಲದ ಕೊಠಡಿ ಆತ್ಮವಿಲ್ಲದ ದೇಹವಿದ್ದಂತೆ. ಸಾಧನೆ ಎನ್ನುವುದು ಸಾಧಕನ ಸ್ವತ್ತೇ ಹೊರತು ಸೊಮಾರಿಗಳ ಸ್ವತ್ತಲ್ಲ ಎಂಬ ಅಂಬೇಡ್ಕರ್ ಅವರ ಮತುಗಳು ಮನನೀಯ ಎಂದರು.
ಬಾಬುಜಿ ಎಂದು ಖ್ಯಾತರಾದ ಬಾಬು ಜಗಜೀವನ ರಾಮ್ ಅಸ್ಪೃಶ್ಯತೆ ನಿವಾರಣೆಯ ಹೋರಾಟಗಾರರಾಗಿದ್ದರು. ಮಹಾನ್ ದಲಿತ ನಾಯಕರಾಗಿದ್ದರು. ಶೋಷಿತರ ಹಕ್ಕು ಗಳಿಗಾಗಿ ಹೋರಾಟ ಮಾಡಿದ ಡಾ.ಜಗಜೀವನ್ ರಾಮ್ ನಾಲ್ಕು ದಶಕಗಳ ಕಾಲ ಸಂಸತ್ತಿನ ಸದಸ್ಯರಾಗಿ, ರಾಷ್ಟ್ರದ ಕೃಷಿ ಸಚಿವರಾಗಿ, ಹಸಿರು ಕ್ರಾಂತಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಇವರನ್ನು ಹಸಿರು ಕ್ರಾಂತಿಯ ಹರಿಕಾರ ಎಂದು ಕರೆಯುತ್ತಾರೆ ಎಂದರು.
ಸಮತಾ ಸೈನಿಕ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀರಾಮಣ್ಣ ಮಾತನಾಡಿ, ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿ. ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಫೂರ್ತಿ. ಇವರ ಆದರ್ಶ ಎಲ್ಲರ ಜೀವನಕ್ಕೆ ದಾರಿ ಎಂದರು.
ಶಾಲಾ ವಿದ್ಯಾರ್ಥಿಗಳಿಗೆ ಭಾರತ ಸಂವಿಧಾನದ 50 ಪುಸ್ತಕ ವಿತರಿಸಲಾಯಿತು. ಭಾರತ ಸಂವಿಧಾನ , ಸಾಮಾಜಿಕ ಋಣ ಸಂದಾಯ, ಕನ್ನಡ ರತ್ನಕೋಶ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಲೂಯಿ ಪ್ಯಾಶ್ಚರ್, ಸರ್.ಎಂ.ವಿ, ಕವನ ಸಂಕಲನಗಳು ಮತ್ತು “ಒಂದು ಕೊಡ ಹಾಲಿನ ಸಮರ” ಪುಸ್ತಕಗಳನ್ನು ಕಸಾಪ ವತಿಯಿಂದ ಅಂಬೇಡ್ಕರ್ ಜಯಂತಿ ನೆನಪಿನಲ್ಲಿ ಶಾಲಾ ಗ್ರಂಥಾಲಯಕ್ಕೆ ನೀಡಲಾಯಿತು.
ಕಸಾಪ ನಗರ ಘಟಕದ ಅದ್ಯಕ್ಷ ಎಲ್.ಕಿರಣ್ ಕುಮಾರ್, ಪರಿಶಿಷ್ಟ ಜಾತಿ ಪ್ರತಿನಿಧಿಗಳಾದ ಮುನಿಯಪ್ಪ, ಟಿ.ಟಿ.ನರಸಿಂಹಪ್ಪ, ಸಂಘಟನಾ ಕಾರ್ಯದರ್ಶಿ ರಾಮಾಂಜನೇಯ, ಸಾಂಸ್ಕೃತಿಕ ಕಾರ್ಯದರ್ಶಿ ಬಿ.ಇ.ನಾಗೇಶ್, ಎಸ್.ಡಿ.ಎಂ.ಸಿ.ಅಧ್ಯಕ್ಷ ವಿನೋದ್ ಕುಮಾರ್, ಮುಖ್ಯ ಶಿಕ್ಷಕ ಚಂದ್ರಶೇಖರ, ಶಿಕ್ಷಕ ಮೊಹಮ್ಮದ್ ಉಸ್ಮಾನ್, ಶಿಕ್ಷಕಿ ನಗೀನ, ಶ್ಯಾಮಲಾ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.