Sidlaghatta : ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ನೀರಾವರಿ ಯೋಜನೆಗಳ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಲು ಹಾಗು ಕೃಷ್ಣ ಪೆನ್ನಾರ್ ನದಿ ಜೋಡಣೆ ಯೋಜನೆ ಬೇಡಿಕೆ ವಿವರಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಲು ಕೋರಿ ಶಾಸಕ ಬಿ.ಎನ್. ರವಿಕುಮಾರ್ ಅವರಿಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ, ಯುವಶಕ್ತಿ ಹಾಗು ರೈತ ಸಂಘ ಪಧಾಧಿಕಾರಿಗಳು ಮನವಿ ಸಲ್ಲಿಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯರೆಡ್ಡಿ ಮಾತನಾಡಿ, ಮೂರೂ ಜಿಲ್ಲೆಗಳ ಕೆರೆ ಕಟ್ಟೆ, ಕಾಲುವೆ ಮತ್ತು ರಾಜಕಾಲುವೆಗಳ ಸಮಗ್ರ ಪುನಶ್ವೇತನ ಹಾಗೂ ಅಭಿವೃದ್ಧಿ ಮಾಡಬೇಕು. ಎತ್ತಿನಹೊಳೆಯಲ್ಲಿ ಇಷ್ಟು ನೀರು ಸಿಗಲು ಸಾಧ್ಯವೇ ಇಲ್ಲ ಎಂದು ಯುಪಿಎ ಸರ್ಕಾರದ ಅಡಿಯಲ್ಲಿನ ಕೇಂದ್ರೀಯ ಜಲ ಆಯೋಗ ಸ್ಪಷ್ಟವಾಗಿ ವಿವರವಾಗಿ ಹೇಳಿತ್ತು. ಈ 10 ವರ್ಷಗಳಲ್ಲಿ ಒಮ್ಮೆಯಾದರೂ ನೀರು ಎಷ್ಟು ಸಿಗುತ್ತದೆಂಬುದರ ಕುರಿತು ಜಲ ಆಯೋಗದ ಸೂಚನೆಗನುಗುಣವಾಗಿ ಅಧ್ಯಯನ ಮಾಡಿಲ್ಲ. ಕೇಂದ್ರೀಯ ಜಲ ಆಯೋಗದಿಂದ ಒಂದು ವರ್ಷದ ಅಧ್ಯಯನವನ್ನಾದರೂ ಮಾಡಿಸಿ, ನೀರು ಸಿಗುತ್ತದೆಂದು ಖಾತರಿಯಾದ ನಂತರವೇ ಮುಂದಿನ ಹಣ ಬಿಡುಗಡೆ ಮಾಡಬೇಕು. ಚುನಾವಣಾ ಸಂದರ್ಭದಲ್ಲಿ ಸ್ವತಃ ಮುಖ್ಯಮಂತ್ರಿಗಳು ನೀಡಿದ ಆಶ್ವಾಸನೆಯಂತೆ ಕೆ.ಸಿ.ವ್ಯಾಲಿ ಮತ್ತು ಎಚ್.ಎನ್.ವ್ಯಾಲಿಯ ಕೊಳಚೆ ನೀರಿನ ಮೂರು ಹಂತದ ಶುದ್ದೀಕರಣ ಮಾಡಲೇಬೇಕು.
ಬರಪೀಡಿತ ಪ್ರದೇಶಗಳ ಕೊಳವೆ ಬಾವಿಗಳ ನೀರಿನ ಗುಣಮಟ್ಟವನ್ನು ಪರಿಶೀಲಿಸಲು ನಿರಂತರ ವ್ಯವಸ್ಥೆ ಆಗಬೇಕು ಮತ್ತು ಅಗತ್ಯವಿರುವ ಕಡೆ ಪರ್ಯಾಯ ಸುರಕ್ಷಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
ಕೃಷ್ಣಾ – ಪೆನ್ನಾರ್ ನದಿ ಜೋಡಣೆಯ ಕುರಿತಂತೆ ಕಾರ್ಯಸಾಧ್ಯತಾ ವರದಿ ಆಗಿರುವುದರಿಂದ, ಈ ಕುರಿತಂತೆ ರಾಜ್ಯ ಸರ್ಕಾರವು ಕೂಡಲೇ ವಿಸ್ತ್ರತ ಯೋಜನಾ ವರದಿ ತಯಾರಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ನೀರಾವರಿ ಹೋರಾಟ ಸಮಿತಿ ಹಾಗು ನಮ್ಮ ಭಾಗದ ರೈತರ ಬೇಡಿಕೆಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ. ಈ ಎಲ್ಲಾ ಯೋಜನೆಗಳ ವಿವರಗಳನ್ನು ಅಧಿವೇಶನದಲ್ಲಿ ವಿವರಿಸಿ ಸರ್ಕಾರದ ಗಮನ ಸೆಳೆಯಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದೆಂದು ಹೇಳಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯರೆಡ್ಡಿ, ಉಪಧ್ಯಕ್ಷ ಮಳ್ಳೂರು ಹರೀಶ್, ಯುವಶಕ್ತಿ ಉಪಾಧ್ಯಕ್ಷ ವಿಜಯ ಬಾವರೆಡ್ಡಿ, ಯುವಶಕ್ತಿ ಸಂಘಟನಾ ಕಾರ್ಯದರ್ಶಿ ಜಯರಾಮ್, ಮುನಿರಾಜು, ಗೋಪಾಲಗೌಡ , ಕೆಂಪೇಗೌಡ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಸಾಮೂಹಿಕ ನಾಯಕತ್ವ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಗೌರವಾಧ್ಯಕ್ಷ ಮುನಿಕೆಂಪಣ್ಣ, ಬಾಲಮುರಳಿಕೃಷ್ಣ, ನಾರಾಯಣಸ್ವಾಮಿ ಹಾಜರಿದ್ದರು.