Sidlaghatta : ಸ್ವತಂತ್ರ್ಯಾ ನಂತರ ಹಲವು ತ್ಯಾಗಜೀವಿಗಳ ಶ್ರಮದ ಫಲವಾಗಿ ಕನ್ನಡನಾಡು ಉದಯವಾಗಿದೆ. ನಮ್ಮಲ್ಲಿ ಪ್ರಾಕೃತಿಕ, ಭೌಗೋಳಿಕ, ಸಾಂಸ್ಕೃತಿಕ ಇತರೆ ಯಾವುದೇ ಸಂಪತ್ತಿಗೂ ಕೊರತೆ ಇಲ್ಲ. ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಸಂಸ್ಕೃತಿ ಇದೆ. ಎಲ್ಲರಿಗೂ ಆಶ್ರಯ ನೀಡುವ ದೊಡ್ಡಗುಣವಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲ್ಲೂಕಿನ ಸಮಾನ ಮನಸ್ಕರ ಹೋರಾಟ ಸಮಿತಿ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಏಕೀಕರಣದಲ್ಲಿ ತ್ಯಾಗ ಮಾಡಿದವರನ್ನು ನಾವು ಸ್ಮರಿಸಬೇಕು. 50 ವರ್ಷಗಳ ಹಿಂದೆ ದೇವರಾಜ್ ಅರಸು ಅವರು ಕರ್ನಾಟಕ ಎಂದು ನಾಮಕರಣ ಮಾಡಿದರು. ನಾವು ಕೇವಲ ನವೆಂಬರ್ ಕನ್ನಡಿಗರಾಗದೇ, ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ, ನಿತ್ಯ ವ್ಯವಹಾರ ದಲ್ಲಿ ಕನ್ನಡವನ್ನೇ ಬಳಸುತ್ತೇನೆ, ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ, ಕನ್ನಡ ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಸದಾ ಕಟಿಬದ್ಧರಾಗಿರುತ್ತೇವೆ ಎಂದು ಇದೇ ವೇಳೆ ದೃಢ ನಿರ್ಧಾರ ಮಾಡೋಣ ಎಂದು ಹೇಳಿದರು.
ತಹಶೀಲ್ದಾರ್ ಬಿ.ಎನ್.ಸ್ವಾಮಿ ಮಾತನಾಡಿ, ಕನ್ನಡ ಸಂಘಟನೆಗಳು ಕೇವಲ ಕನ್ನಡ ರಾಜ್ಯೋತ್ಸವಕ್ಕೆ ಸೀಮಿತರಾಗಬಾರದು. ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳನ್ನು ಪ್ರೋತ್ಸಾಹಿಸಬೇಕು. ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಆರ್ಥಿಕ ಮತ್ತು ಶೈಕ್ಷಣಿಕ ಸಹಕಾರ ನೀಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡದ ಪುಸ್ತಕಗಳನ್ನು ಓದುವ ಓದಿಸುವ ಅಭಿಯಾನವನ್ನು ನಡೆಸಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಕನ್ನಡದಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುಂಚೆ ನಗರದ ಬಸ್ ನಿಲ್ದಾಣದ ಬಳಿಯಿಂದ 150 ಅಡಿ ಉದ್ದದ ಕನ್ನಡ ಧ್ವಜವನ್ನು ಮೆರವಣಿಗೆ ಮಾಡಲಾಯಿತು. ಜಾನಪದ ನೃತ್ಯ ಕಲಾ ತಂಡಗಳು, ಐವತ್ತು ಕಳಶಗಳನ್ನು ಹೊತ್ತ ಹೆಣ್ಣುಮಕ್ಕಳು, ಕನ್ನಡ ಬಾವುಟ ಹಿಡಿದ 200 ಮಕ್ಕಳು ಮತ್ತು ತಾಯಿ ಭುವನೇಶ್ವರಿ ಹೊತ್ತ ಪಲ್ಲಕ್ಕಿಗಳ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿದವು.
ತಾಲ್ಲೂಕು ಪಂಚಾಯಿತಿ ಇಒ ಜಿ.ಮುನಿರಾಜ, ಸರ್ಕಲ್ ಇನ್ಸ್ ಪೆಕ್ಟರ್ ಎಂ.ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಮೇಲೂರು ಮಂಜುನಾಥ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟೇಶ್, ಸಮಾನ ಮನಸ್ಕರ ಹೋರಾಟ ಸಮಿತಿಯ ವಿಸ್ಡಂ ನಾಗರಾಜ್, ರವಿಪ್ರಕಾಶ್, ಪ್ರತೀಶ್, ರಾಮಾಂಜಿ, ಮಧುಲತಾ, ಸುನಿಲ್, ನಾರಾಯಣಸ್ವಾಮಿ, ಅರುಣ್, ದೇವಪ್ಪ, ಶ್ರೀರಾಮ್, ದೀಪು ಹಾಜರಿದ್ದರು.