ತಾಲ್ಲೂಕಿನ ಯುವ ಪದವೀಧರರಲ್ಲಿ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಹೊಂದಿದ್ದವರಿಗೆ ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯ ಬಹು ನಿರೀಕ್ಷಿತ ನೇಮಕಾತಿ ಪ್ರಕ್ರಿಯಾದ ಪೊಲೀಸ್ ಸಬ್ ಇನ್ಸ್ಪೆಕ್ಟರ್(ಸಿವಿಲ್) ಗಳ ಉದ್ಯೋಗಕ್ಕಾಗಿ ಪದವಿ ಮುಗಿಸಿ ಕಾಯುತ್ತಿದ್ದ ಆಸಕ್ತ ಯುವಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೋಧನೆ ಹಾಗೂ ತರಬೇತಿಯನ್ನು ಆಯೋಜಿಸಿದ್ದೇವೆ ಎಂದು ಯೂನಿಟಿ ಸಿಲ್‌ಸಿಲಾ ಫೌಂಡೇಶನ್ ಅಧ್ಯಕ್ಷ ಮಹಮದ್ ಅಸದ್ ತಿಳಿಸಿದರು.
ನಗರದಲ್ಲಿ ಮಾತನಾಡಿದ ಅವರು, ಹೊಸಕೋಟೆ ದೀನಿಯಾತ್ ಸುಪ್ಫಾ ಫೌಂಡೇಶನ್, ಮಂಗಳೂರು ಏಸ್ ಅಕಾಡೆಮಿ, ಯೂನಿಟಿ ಸಿಲ್‌ಸಿಲಾ ಫೌಂಡೇಶನ್, ಏರ್ಟೆಲ್ ಎಕ್ಸ್ಟ್ರೀಮ್ ಫೈಬರ್ ವಿತರಕರು ಹಾಗೂ ಮದೀನಾ ಮಸ್ಜಿದ್ ಇವರ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ತರಬೇತಿ ಶಿಬಿರವನ್ನು ಆಯೋಜಿಸಲಾಗುತ್ತಿದೆ.
ಶೈಕ್ಷಣಿಕ ವರ್ಷ 2018-19, 2019-20 ರಲ್ಲಿ ಯಾವುದೇ ಪದವಿಯಲ್ಲಿ ಉತ್ತೀರ್ಣರಾದ ಹಾಗೂ ಪ್ರಸಕ್ತ 2020-21 ನೆ ಶೈಕ್ಷಣಿಕ ವರ್ಷದಲ್ಲಿ ಕೊನೆಯ ಪದವಿಯ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿರುವ ಪದವಿಧರರ ಉಜ್ವಲ ಭವಿಷ್ಯದ ಸಂಕಲ್ಪದೊಂದಿಗೆ ಜನವರಿ 24 ಭಾನುವಾರ ದಿಂದ ತರಬೇತಿ ಶಿಬಿರವನ್ನು ನಗರದ ಮದೀನಾ ಮಸೀದಿ ಹತ್ತಿರದ ದೀನಿಯಾತ್ ಬಿಲ್ಡಿಂಗ್ ನಲ್ಲಿ ಪ್ರಾರಂಭಿಸುತ್ತಿದ್ದೇವೆ.
ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಆಸಕ್ತರಿರುವ ಪದವೀಧರರಿಗೆ ಉದ್ಯೋಗ ಒದಗಿಸುವ ಸಲುವಾಗಿ ರಾಜ್ಯ ಸರ್ಕಾರದಿಂದ 545 ನೇಮಕಾತಿಗಳನ್ನು ಬರ್ತಿ ಮಾಡಲು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಶಿಡ್ಲಘಟ್ಟ ತಾಲ್ಲೂಕಿನ ನಿರುದ್ಯೋಗಿ ಯುವಕರು ಇದರಲ್ಲಿ ಹೆಚ್ಚಾಗಿ ಪಾಲ್ಗೊಂಡು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲಿ, ನಮ್ಮ ತಾಲ್ಲೂಕಿಗೆ ಕೀರ್ತಿ ತರಲಿ ಎಂಬ ಆಶಾ ಭಾವನೆಯೊಂದಿಗೆ ತರಬೇತಿ ಶಿಬಿರವನ್ನು ನಡೆಸಲಾಗುತ್ತಿದೆ.
ನಿಷ್ಠಾವಂತ ಪೊಲೀಸ್ ಸಬ್ ಇಸ್ಪೆಕ್ಟರ್ ಹುದ್ದೆಯನ್ನು ಹೇಗೆ ಅಲಂಕರಿಸಬೇಕೆಂಬ ವಿಷಯದಲ್ಲಿ ಭೋಧನೆ ನೀಡುವುದರ ಜೊತೆಗೆ, ಈ ಹುದ್ದೆಗೆ ಬೇಕಾದ ಶಾರೀರಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ತರಬೇತಿ ನೀಡಲಾಗುವುದು. ಆಸಕ್ತ ಯುವಕ ಯುವತಿಯರು ಈ ಅವಕಾಶವನ್ನು ತಪ್ಪದೆ ಸದುಪಯೋಗ ಪಡೆದುಕೊಂಡು ನಮ್ಮ ಶಿಡ್ಲಘಟ್ಟ ತಾಲ್ಲೂಕಿನ ಕೀರ್ತಿ ಬೆಳಗಿಸುವುದರ ಜೊತೆಗೆ ಮಾದರಿ ಪೊಲೀಸ್ ಅಧಿಕಾರಿಗಳಾಗಿ ಸಮಾಜದ ಪರಿವರ್ತನೆಯ ಪರ್ವಕ್ಕೆ ನಾಂದಿ ಹಾಡಬೇಕು ಎಂದರು.
ಸತತ 65 ದಿನಗಳವರೆಗೆ ಸಂಜೆ 6 ರಿಂದ 9 ಗಂಟೆಯವರೆಗೆ ಆನ್ಲೈನ್ ಲೈವ್ ಕ್ಲಾಸ್ ಜೊತೆಗೆ ಭೋದನೆ ಮಾಡಿದ ವಿಷಯಗಳಲ್ಲಿ 22 ವಿವಿದ ಬಗೆಯ ಪರೀಕ್ಷೆಗಳ ಜೊತೆಗೆ ಬೆಳಿಗ್ಗೆ ಮತ್ತು ಸಂಜೆ ಎರಡು ಗಂಟೆಗಳ ಕಾಲ ಶಾರೀರಿಕ (ಫಿಜಿಕಲ್) ಪರೀಕ್ಷಾ ತರಬೇತಿ ನೀಡಲಾಗುವುದು.
ಆಸಕ್ತರು, ಮೊಹಮ್ಮದ್ ಅಸದ್ (9342488006), ಅಫ್ಸರ್ ಪಾಷ.ಸಿ (9845324644) ಇವರನ್ನು ಸಂಪರ್ಕಿಸಲು ಕೋರಿದ್ದಾರೆ.