19.1 C
Sidlaghatta
Monday, December 23, 2024

ಕಾವೇರಿ ನೀರನ್ನು ನಮಗೂ ಹರಿಸಬಾರದೆ? – ಸಮ್ಮೇಳನಾಧ್ಯಕ್ಷ ಸಂತೆ ನಾರಾಯಣಸ್ವಾಮಿ

- Advertisement -
- Advertisement -

Appegowdanahalli, Sidlaghatta : ಕಾವೇರಿ ನೀರನ್ನು 100 ಕಿ.ಮೀ.ನಿಂದ ತಂದು ಬೆಂಗಳೂರಿನಲ್ಲಿ 10 ನೇ ಮಹಡಿಯಲ್ಲಿ ವಾಸಿಸುವ ಜನತೆ ಬಳಸುವುದಾದರೆ, ಇಲ್ಲಿಯವರೆಗು ಸ್ವಚ್ಛಂದ ಜೀವನ ಮಾಡುತ್ತಿದ್ದ ಬೆಂಗಳೂರಿನಿಂದ ಕೇವಲ ೪೦ ಕಿ.ಮೀ. ದೂರದಲ್ಲಿರುವ ಬಯಲುಸೀಮೆ ಭಾಗದ ಜನತೆ ಸರ್ಕಾರ ಸಂಸ್ಕರಿಸಿದ ಕೊಳಚೆ ನೀರನ್ನು ಕುಡಿಯಬೇಕೆ, ಕಾವೇರಿ ನೀರನ್ನು ನಮಗೂ ಹರಿಸಬಾರದೆ? ನಮ್ಮ ಭಾಗದ ಜನ ಈ ಬಗ್ಗೆ ಯೋಚಿಸಿ ಸಾಂಸ್ಕೃತಿಕ ದಂಗೆಗೆ ಮುಂದಾಗಬೇಕು ಎಂದು ಸಮ್ಮೇಳನಾಧ್ಯಕ್ಷ ಸಂತೆ ನಾರಾಯಣಸ್ವಾಮಿ ಹೇಳಿದರು.

ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಶ್ರೀ ಇಂದಿರಾಗಾಂಧಿ ವಸತಿಶಾಲೆ ಆವರಣದಲ್ಲಿ ಸೋಮವಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಒಂಬತ್ತನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆಲವೇ ದಶಕಗಳ ಹಿಂದೆ ನಮ್ಮ ತಾಲ್ಲೂಕಿನ ಜನ ತಮ್ಮ ತಮ್ಮ ಊರುಗಳಲ್ಲಿನ ಬಾವಿ, ಕೆರೆ, ಕುಂಟೆಗಳಿಂದ ನೀರನ್ನು ಕುಡಿಯುವುದಕ್ಕೆ ಬಳಸುತ್ತಿದ್ದೆವು. ಬಹುಶಃ ಆ ನೀರು ಈಗಿನ ಸಂಸ್ಕರಿಸಿದ ನೀರಿಗಿಂತ ನೂರುಪಾಲು ಉತ್ತಮವಾಗಿತ್ತು. ಕಾರಣ ಆಗ ಯಾವುದೇ ಸೂಕ್ಷ್ಮಾಣು ಜೀವಿಗಳಾಗಲಿ ಇಲ್ಲವೇ ವಿಷಕಾರಿಕ ರಾಸಾಯನಿಕಗಳಾಗಲಿ ಇರಲಿಲ್ಲ. ಈಗಿನ ನಮ್ಮ ಘನ ಸರ್ಕಾರಗಳು ಬೆಂಗಳೂರಿನ ಜನ ಉಪಯೋಗಿಸಿದ ಕಾವೇರಿ ನೀರನ್ನು ಸಂಸ್ಕರಿಸಿ ನಮ್ಮ ಕೆರೆಗಳಿಗೆ ತುಂಬಿಸುತ್ತಿದ್ದಾರೆ. ಈ ನೀರು ಯಾರ್ಯಾರೋ ಬಾಯಿಂದ, ಹೊಟ್ಟೆಯಿಂದ ಪಾಸಾಗಿ ಹೊರಬಂದ ನೀರು. ಎಷ್ಟೇ ಸಂಸ್ಕರಣವಾಗಿರಲಿ ಈ ನೀರನ್ನು ನಾವು ಕುಡಿಯಬೇಕೇ? ಸಾಂಸ್ಕೃತಿಕವಾಗಿ ಕನ್ನಡ ಜನ ಬಾವುಕರು. ತಮ್ಮ ಮನಃಪಟಲದಿಂದ ಈ ಸಾಂಸ್ಕೃತಿಕ ಅದಃಪತನವನ್ನು ಸಹಿಸಿಯಾರೇ? ಈ ಸಂಸ್ಕರಿಸಿದ ನೀರನ್ನು ಕುಡಿದು ಕ್ರಮೇಣ ಸಾಯುದಕ್ಕಿಂತ ನೀರನ್ನು ಕುಡಿಯದೇ ಉಪವಾಸ ಸಾಯುವುದು ಲೇಸು ಎಂದರು.

ನಮ್ಮ ಶಿಡ್ಲಘಟ್ಟ ತಾಲ್ಲೂಕು ಮಳೆಯಾಶ್ರಿತ ಬರಗಾಲ ನಾಡಾಗಿದ್ದು ಇಲ್ಲಿ ಯಾವುದೇ ನದಿ, ನದಿಪಾತ್ರ, ನೀರಾವರಿ ಸೌಕರ್ಯವಿಲ್ಲ. ಆದರೂ ಇಲ್ಲಿನ ರೈತಾಪಿ ಜನಗಳು ಬಹಳ ಶ್ರಮಜೀವಿಗಳು. ಪ್ರತಿ ಹಳ್ಳಿಯಲ್ಲಿ ನೂರಾರು ಬಾವಿಗಳನ್ನು ತೋಡಿದ್ದು ಉಂಟು. ಸಮೃದ್ಧವಾಗಿ ಬೆಳೆಗಳನ್ನು ಬೆಳೆಯುತ್ತಿದ್ದರು. ಇದು ಬಹಳ ಕಾಲ ನಡೆಯಲಿಲ್ಲ. ಈಗ ಈ ಬಾವಿಗಳೆಲ್ಲ ಬರಿದಾಗಿ ಬತ್ತಿವೆ. ಛಲದಂಕಮಲ್ಲನಂತೆ ಈ ರೈತರು ಸುಮ್ಮನೆ ಕೂಡಲಿಲ್ಲ. ೧೯೬೦, ೭೦, ೮೦ ನೇ ದಶಕಗಳಲ್ಲಿ ಕೊಳವೆಬಾವಿಗಳನ್ನು ಕೊರೆಸಿದರು. ಉತ್ತಮವಾಗಿ ದ್ರಾಕ್ಷಿ, ಸಪೋಟ, ದಾಳಿಂಬೆ, ಟೊಮೊಟೊ ಇನ್ನಿತರ ಹಣ್ಣು ತರಕಾರಿಗಳನ್ನು ಬೆಳೆದರು. ಕ್ರಮೇಣ ಬತ್ತಿ ಹೋದ ಕೊಳವೆಬಾವಿಗಳನ್ನು ನಂಬಿ ಕೂಡದೇ ಛಲ ಬಿಡದ ತ್ರಿವಿಕ್ರಮನಂತೆ ರೈತರು ಹಾಲು ಉತ್ಪಾದನೆ – ಹೆಚ್ಚು ಹಾಲು ಕೊಡುವ ಉತ್ತಮ ತಳಿಗಳಾದ ಜರ್ಸಿ, ರೆಡ್ಡೇನ್, ಹೊಲ್‌ಸ್ಟೇನ್ ಈ ರಾಸುಗಳನ್ನು ಹೊರದೇಶಗಳಿಂದ ತರಿಸಿ ಹಾಲು ಉತ್ಪಾದಿಸಿ ಬೆಂಗಳೂರಿಗೆ ಸಾಗಿಸಿ, ಹೈನುಗಾರಿಕೆಯನ್ನು ತಮ್ಮ ಮುಖ್ಯ ಕಸುಬಾಗಿ ಮಾಡಿಕೊಂಡ ಹಿನ್ನಲೆಯಲ್ಲಿ ಕಳೆದ ಶತಮಾನದ ಕೊನೆಯ ದಶಕಗಳಲ್ಲಿ ಶಿಡ್ಲಘಟ್ಟ ಪ್ರದೇಶವು “ಜೋನ್ ಆಫ್ ಸಿಲ್ಕ್, ಮಿಲ್ಕ್ ಅಂಡ್ ಸೀಡ್” ಎಂಬ ಪ್ರದೇಶವೆಂದು ಹೆಸರುಗಳಿಸಿದ ಕೀರ್ತಿಯಿದೆ ಎಂದರು.

ಕನ್ನಡಿಗರ ಧ್ಯೇಯ :

Sidlaghatta Appegowdanahalli Kannada Sahitya Sammelana

ನಾವು ಬದುಕಬೇಕು ಮತ್ತು ಬೇರೆ ಭಾಷೆಯಾಡುವ ಜನರನ್ನು ಬದುಕಲು ಸಹಕರಿಸಬೇಕು. ಕನ್ನಡ ಭಾಷೆ ಬಹಳ ಸುಂದರವಾದುದು, ಅರ್ಥಗರ್ಭಿತವಾದುದು, ಎಷ್ಟರ ಮಟ್ಟಿಗೆ ಎಂದರೆ ಅಕ್ಕ ಪಕ್ಕದ ರಾಜ್ಯದ ಭಾಷೆಗಳಾದ ತೆಲುಗು, ತಮಿಳು, ಮಲೆಯಾಳಂ ಹಾಗೂ ಮರಾಠಿ ಇವುಗಳನ್ನು ತನ್ನ ಒಡಲಲ್ಲಿ ಆವರಿಸಿಕೊಂಡಿದೆ ಆದರೂ ತನ್ನ ತನವನ್ನು ಬಿಟ್ಟಿಲ್ಲ. ಕನ್ನಡದ ಭಾಷೆಯ ಮೇಲೆ ಆಂಗ್ಲ ಭಾಷೆಯ ಹೊಡೆತ ಬಹಳಷ್ಟಿದೆ: ಉದಾಹರಣೆಗೆ ಪಂಪ್‌ಸೆಟ್, ಬೈಸಿಕಲ್, ಮೋಟಾರ್, ಕಾರು ಇವೆಲ್ಲ ಆಂಗ್ಲ ಭಾಷೆಯ ಪದಗಳಾದರೂ ಸಹ ಕನ್ನಡೀಕರಣವಾಗಿವೆ. ಕನ್ನಡದ ಜನ ಪರಭಾಷಾ ಸಹಿಷ್ಣುಗಳಾದರೂ ಪರನಿಂದನೆಯನ್ನು ಸಹಿಸುವುದಿಲ್ಲ. ಹೊರರಾಜ್ಯಗಳಿಂದ ಬರುವ ಅತಿಥಿಗಳನ್ನು ಹರುಕು – ಮುರುಕಾಗಿ ಅವರ ಭಾಷೆಗಳಲ್ಲೇ ಮಾತನಾಡಿಸಿ ಮಾರ್ಗದರ್ಶನ ನೀಡಲು ಪ್ರಯತ್ನಿಸುತ್ತೇವೆ. ಇದು ನಮ್ಮ ಕನ್ನಡಿಗರ ಉದಾರ ಗುಣ ಎಂದರು.

ಕಳೆದ ನಾಲ್ಕೈದು ದಶಕಗಳಿಂದ ನಮ್ಮ ಹಳ್ಳಿಗಳಿಗೆ ಹೋಗಿಬರುವ ಎಲ್ಲಾ ರಸ್ತೆಗಳಲ್ಲಿ ಪಾರ್ಥೇನಿಯಮ್ ಎಂಬ ವಿದೇಶಿ ಕಳೆ ರಾರಾಜಿಸುತ್ತಿದೆ. ಈ ವಿಷಯದಲ್ಲಿ ನಮ್ಮ ಶಿಡ್ಲಘಟ್ಟ ತಾಲ್ಲೂಕು ಹೊರತೇನಲ್ಲ. ಈ ಕಳೆ ಒಂದು ತರಹ ರಕ್ತಬೀಜಾಸುರ ಕಳೆ. ಇದನ್ನು ಸಮುದಾಯಗಳೇ ನಿರ್ವಹಿಸಬೇಕು. ಇಲ್ಲವೆ ಸರ್ಕಾರವು ಈ ಕಳೆಯನ್ನು ನಿರ್ಮೂಲನೆ ಮಾಡಬೇಕು.

ರಸ್ತೆಯ ಇಕ್ಕೆಲಗಳಲ್ಲಿ ಬಸ್ ನಿಲ್ದಾಣಗಳಲ್ಲಿ, ಶಾಲಾ-ಕಾಲೇಜು ಆವರಣಗಳಲ್ಲಿ, ಅಷ್ಟೇಕೆ ಚರಂಡಿ, ತಿಪ್ಪೆ, ಗೊಬ್ಬರಗಳನ್ನು ಸಹ ಈ ಪ್ಲಾಸ್ಟಿಕ್ ಬಿಟ್ಟಿಲ್ಲ. ಇದೊಂದು ಹಾನಿಕಾರಕ ವಸ್ತು. ಇದು ಕೊಳೆಯುವುದಿಲ್ಲ. ಹಾಗೇ ನೂರಾರು ವರ್ಷ ಇರುತ್ತದೆ. ನಮ್ಮ ಪಕ್ಕದ ದೇಶ ಶ್ರೀಲಂಕಾದಲ್ಲಿ ಪ್ಲಾಸ್ಟಿಕ್ ಹಾವಳಿಯನ್ನು ತಡೆಗಟ್ಟಿದ್ದಾರೆ. ನಮ್ಮಲ್ಲಿ ಏಕೆ ತಡೆಗಟ್ಟಿಲ್ಲ; ಕಾರಣ ಮತ್ತೇ ಅದೇ ಸಮಸ್ಯೆ. ಏನೆಂದರೆ ಇದು ಸಮುದಾಯದ ಸಮಸ್ಯೆ. ಈ ಸಮುದಾಯ ಸಮಸ್ಯೆಗಳನ್ನು ಪಂಚಾಯತಿ, ತಾಲ್ಲೂಕು ಮತ್ತು ಜಿಲ್ಲಾಡಳಿತಗಳು ಗಮನವಹಿಸಿ ಪರಿಹರಿಸಬೇಕು. ಇದೇನು ಅಷ್ಟು ಕಷ್ಟದ ಕೆಲಸವಲ್ಲ. ಚಿಂದಿ ಆಯುವವರಿಗೆ ಕಿ.ಗ್ರಾಂ.ಪ್ಲಾಸ್ಟಿಕ್‌ಗೆ ೧೦ರೂಪಾಯಿಯಂತೆ ಸಹಾಯಧನ ನೀಡಿದರೆ ಪ್ಲಾಸ್ಟಿಕ್ ಸಮಸ್ಯೆಯನ್ನು ನಿವಾರಿಸಬಹುದು ಎಂದರು.

Sidlaghatta Appegowdanahalli Kannada Sahitya Sammelana

ಪ್ರತಿಯೊಬ್ಬರೂ ಒಂದೊಂದು ಸಸಿ ನೆಟ್ಟು ಕಾಪಾಡುತ್ತಾ ಪರಿಸರ ರಕ್ಷಣೆಗೆ ಕಾಳಜಿ ವಹಿಸಬೇಕು. ಪರಿಸರ ಉಳಿದಲ್ಲಿ ಮಳೆ ಬರುತ್ತದೆ, ನೀರು ಇಂಗಿಸಿದಲ್ಲಿ ನಮ್ಮ ಬಾಳು ಬಂಗಾರವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಸಮ್ಮೇಳನಾಧ್ಯಕ್ಷೆ ದೇವರಮಳ್ಳೂರು ವಿ.ಯಶೋದಮ್ಮ ಅವರು ಪರಿಷತ್ತಿನ ಧ್ವಜವನ್ನು ಸಮ್ಮೇಳನಾಧ್ಯಕ್ಷ ಸಂತೆ ನಾರಾಯಣಸ್ವಾಮಿ ಅವರಿಗೆ ಹಸ್ತಾಂತರಿಸಿದರು. ಶಾಸಕ ವಿ.ಮುನಿಯಪ್ಪ ಸಮ್ಮೇಳನಾಧ್ಯಕ್ಷರ ಭಾಷಣದ ಪುಸ್ತಕವನ್ನು ಬಿಡುಗಡೆ ಮಾಡಿದರು. ದೇವರಮಳ್ಳೂರು ಡಿ.ಎಂ.ಮಹೇಶ್‌ಕುಮಾರ್ ಮತ್ತು ನಾಗೇಶ್ ತಂಡ ನಾಡಗೀತೆ ಮತ್ತು ರೈತ ಗೀತೆಯನ್ನು ಹಾಡಿದರು.

ಶಾಸಕ ವಿ.ಮುನಿಯಪ್ಪ, ತಹಸೀಲ್ದಾರ್ ಬಿ.ಎಸ್.ರಾಜೀವ್, ತಾಲ್ಲೂಕು ಪಂಚಾಯಿತಿ ಇಒ ಮುನಿರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ರಘುನಾಥರೆಡ್ಡಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಕಸಾಪ ಜಿಲ್ಲಾಧ್ಯಕ್ಷ ಕೋಡಿರಂಗಪ್ಪ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಅಮೃತಕುಮಾರ್, ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ನಿಕಟಪೂರ್ವ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಡಾ.ಸತ್ಯನಾರಾಯಣ, ಗೌರವ ಕಾರ್ಯದರ್ಶಿ ಕೆ.ಮಂಜುನಾಥ, ಕೋಶಾಧ್ಯಕ್ಷ ಎಂ.ಸುಧೀರ್, ಮಹಿಳಾ ಪ್ರತಿನಿಧಿಗಳಾದ ಸುಮ, ದಾಕ್ಷಾಯಿಣಿ, ಪದಾಧಿಕಾರಿಗಳಾದ ಟಿ.ಟಿ.ನರಸಿಂಹಪ್ಪ, ಮುನಿಯಪ್ಪ, ಶಶಿಕುಮಾರ್.ಎ, ಮೋಹನ್‌ಕುಮಾರ್ ಮತ್ತಿತರರು ಹಾಜರಿದ್ದರು.

ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ಆಯೋಜಿಸುವ ಮೂಲಕ ಕನ್ನಡ ಭಾಷೆಯ ಮೇಲಿನ ಗೌರವ ಹೆಚ್ಚಿಸುವಂತ ಕೆಲಸ ಮಾಡಬೇಕಾಗಿದೆ. ಕನ್ನಡ ಭಾಷೆ, ನಾಡು, ನುಡಿ ಸಂಸ್ಕೃತಿಯ ಮೇಲೆ ಕನ್ನಡಿಗರಾದ ನಾವು ಹೆಚ್ಚಿನ ನಂಬಿಕೆ ಇಟ್ಟುಕೊಂಡು ಕೆಲಸ ಮಾಡಬೇಕಿದೆ.

ಶಾಸಕ ವಿ.ಮುನಿಯಪ್ಪ

ಎರಡು ಜಿಲ್ಲಾ ಸಮ್ಮೇಳನ ಸೇರಿದಂತೆ ೮ ತಾಲೂಕು ಸಮ್ಮೇಳನಗಳನ್ನು ನಗರ ಪ್ರದೇಶದಲ್ಲಿ ನಡೆಸಿದ್ದು ಇದೇ ಮೊದಲ ಭಾರಿಗೆ ಗ್ರಾಮಾಂತರ ಪ್ರದೇಶದಲ್ಲಿ ಅರ್ಥಪೂರ್ಣವಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು ತೃಪ್ತಿ ತಂದಿದೆ. ನಿರಂತರ ಅಧ್ಯಯನದಿಂದ ಉತ್ತಮ
ಗುಣಮಟ್ಟದ ಸಾಹಿತ್ಯ ರಚನೆಯಾಗಿ ತನ್ಮೂಲಕ ಕನ್ನಡ ಭಾಷೆಯ ಅಭಿವೃದ್ಧಿಯಾಗಬಲ್ಲದು. ಸಾಹಿತ್ಯದ ಬಗೆಗೆ ಆಸಕ್ತಿ ಹಾಗೂ ಓದುವಿಕೆಯ ಗೀಳನ್ನು ಹೆಚ್ಚಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಸಮ್ಮೇಳನಗಳು ಹೆಚ್ಚು ಸಹಕಾರಿಯಾಗಿವೆ.

ಬಿ.ಆರ್.ಅನಂತಕೃಷ್ಣ, ಕಸಾಪ ತಾಲ್ಲೂಕು ಅಧ್ಯಕ್ಷರು.

“ಕನ್ನಡ ನಿತ್ಯ ಉತ್ಸವದಂತೆ ಜಿಲ್ಲೆಯಾಧ್ಯಂತ ನಡೆಯಬೇಕು ಎಂಬ ಉದ್ದೇಶದಿಂದ ಕಸಾಪ ಅನೇಕ ಕಾರ್ಯಕ್ರಮಗಳನ್ನು ಜಿಲ್ಲೆಯಾಧ್ಯಂತ ಹಮ್ಮಿಕೊಳ್ಳುತ್ತಿದೆ. ಕಳೆದ ಹಲವು ವರ್ಷಗಳಿಂದಲೂ ಕಸಾಪ ಮನೆಮನಗಳಲ್ಲಿ ಕನ್ನಡ ವಾತಾವರಣ ನಿರ್ಮಿಸಲು ಶ್ರಮಿಸಿದೆ. ಶಿಡ್ಲಘಟ್ಟದಲ್ಲಿ ಇದೇ ಮೊದಲ ಭಾರಿಗೆ ಗ್ರಾಮೀಣ ಪ್ರದೇಶದಲ್ಲಿ ಸಮ್ಮೇಳನ ಆಯೋಜಿಸಿರುವುದು ನಿಜಕ್ಕೂ ಸಂತೋಷದ ವಿಷಯ, ಕನ್ನಡ ಕಟ್ಟುವ ಕೆಲಸದಲ್ಲಿ ವಿದ್ಯಾರ್ಥಿಗಳ ಹಾಗು ಮಕ್ಕಳ ಪಾತ್ರ ಬಹಳಷ್ಟಿದೆ ಹಾಗಾಗಿ ಮುಂದಿನ ದಿನಗಳಲ್ಲಿ ಬಾಷೆ ಕಟ್ಟುವ ಕೆಲಸದಲ್ಲಿ ಮಕ್ಕಳು ಹಾಗು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಕೊಳ್ಳಬೇಕು.

ಡಾ.ಕೋಡಿರಂಗಪ್ಪ, ಕಸಾಪ ಜಿಲಾಧ್ಯಕ್ಷ

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!