Sidlaghatta : ಡಿಸೆಂಬರ್ 12 ರಂದು ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಆವರಣದಲ್ಲಿ ಆಯೋಜಿಸಿರುವ 9 ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಭಕ್ತರಹಳ್ಳಿ ಸಂತೆ ನಾರಾಯಣಸ್ವಾಮಿ ಅವರಿಗೆ ಕಸಾಪ ವತಿಯಿಂದ ಶುಕ್ರವಾರ ವೀಳ್ಯ, ಫಲತಾಂಬೂಲವನ್ನು ನೀಡಿ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು 9 ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೊಟ್ಟ ಮೊದಲ ಬಾರಿಗೆ ಗ್ರಾಮೀಣ ಭಾಗದಲ್ಲಿ ಆಯೋಜಿಸಲಿದೆ. ಈ ಬಾರಿ ತಾಲ್ಲೂಕಿನ ಗ್ರಾಮೀಣ ಭಾಗದ ಸಾಹಿತಿ, ತೋಟಗಾರಿಕಾ ತಜ್ಞ, ಇತಿಹಾಸ ಸಂಶೋದಕ, ವಾಸ್ತುಶಿಲ್ಪ ಅಧ್ಯಯನಾಸಕ್ತ, ಪರಿಸರ ತಜ್ಞ, ಅನುವಾದಕರಾದ ಭಕ್ತರಹಳ್ಳಿ ಸಂತೆ ನಾರಾಯಣಸ್ವಾಮಿ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ. ಸಾಧಕರನ್ನು ಅದರಲ್ಲೂ ಸಾಹಿತ್ಯಿಕವಾಗಿ ಅಪಾರ ಸಾಧನೆ ಮಾಡಿರುವ ಹಿರಿಯರನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಗೌರವಿಸುತ್ತಿರುವುದಕ್ಕೆ ನಮಗೆಲ್ಲಾ ಹೆಮ್ಮೆಯಿದೆ ಎಂದರು.
ಭಕ್ತರಹಳ್ಳಿ ಸಂತೆ ನಾರಾಯಣಸ್ವಾಮಿ ಮಾತನಾಡಿ, “ನಾನು ಭಕ್ತರಹಳ್ಳಿಯ ಕೃಷಿಕ ಕುಟುಂಬದಲ್ಲಿ ಜನಿಸಿದವನು. ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದವನು. ನಮ್ಮ ಹಳ್ಳಿಯಲ್ಲಿದ್ದ ವಯಸ್ಕರ ಶಿಕ್ಷಕರ ಸಮಿತಿಯ ಗ್ರಂಥಾಲಯವು ನನಗೆ ಓದುವ ಹಂಬಲವನ್ನು ಪ್ರೇರೇಪಿಸಿತು. ಚಿಕ್ಕ ವಯಸ್ಸಿನಿಂದಲೇ ಇತಿಹಾಸದ ಬಗ್ಗೆ ಬಹಳ ಕುತೂಹಲವುಳ್ಳವನಾಗಿ ಪುಸ್ತಕ ಪ್ರೇಮಿಯಾದೆ. ನನ್ನ ವಿವಿಧ ಆಸಕ್ತಿಗಳು ಸಾಹಿತ್ಯದಲ್ಲಿ ಕೃಷಿ ಮಾಡಲು ಕಾರಣವಾಯಿತು. ಈ ಬಾರಿಯ ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನನ್ನಾಗಿ ಮಾಡಿ ಗೌರವಿಸುತ್ತಿರುವುದನ್ನು ನಮ್ರತೆಯಿಂದ ಸ್ವೀಕರಿಸುತ್ತಿದ್ದೇನೆ” ಎಂದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೋಡಿರಂಗಪ್ಪ, ಜಿಲ್ಲಾ ಕಾರ್ಯದರ್ಶಿ ಅಮೃತ ಕುಮಾರ್, ಜಿಲ್ಲಾ ಪದಾಧಿಕಾರಿ ಎಸ್ ಸತೀಶ್, ತಾಲ್ಲೂಕು ಕಾರ್ಯದರ್ಶಿ ಕೆ.ಮಂಜುನಾಥ್, ಖಜಾಂಚಿ ಸುಧೀರ್, ಟಿ.ಟಿ.ನರಸಿಂಹಪ್ಪ, ದಾಕ್ಷಾಯಿಣಿ, ನಿ.ಪೂ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಭಕ್ತರ ಹಳ್ಳಿ ನಾಗೇಶ್, ಬಿ.ಎಂ.ವಿ.ವಿದ್ಯಾಸಂಸ್ಥೆ ಕಾರ್ಯದರ್ಶಿ ಎಲ್.ಕಾಳಪ್ಪ, ವಕೀಲ ಜಯರಾಂ, ವೆಂಕಟೇಶ್, ಸಾಹಿತಿ ಚಂದ್ರಶೇಖರ ಹಡಪದ್, ಎಸ್.ವಿ.ನಾಗರಾಜರಾವ್ ಹಾಜರಿದ್ದರು.