Sidlaghatta : ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು 9 ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೊಟ್ಟ ಮೊದಲ ಬಾರಿಗೆ ಗ್ರಾಮೀಣ ಭಾಗದಲ್ಲಿ ಆಯೋಜಿಸಲಿದ್ದು, ಸಮ್ಮೇಳನಾಧ್ಯಕ್ಷರಾಗಿ ಭಕ್ತರಹಳ್ಳಿಯ ಸಂತೆ ನಾರಾಯಣಸ್ವಾಮಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ 12 ರಂದು ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಆವರಣದಲ್ಲಿ ಆಯೋಜಿಸಲು ಶಾಸಕರ ಒಪ್ಪಿಗೆ ಪಡೆದು ತಾಲ್ಲೂಕು ಕಸಾಪ ಕಾರ್ಯಕಾರಿ ಸಭೆಯಲ್ಲಿ ತೀರ್ಮಾನಿಸಲಾಯಿತು ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದ್ದಾರೆ.
ಭಕ್ತರಹಳ್ಳಿ ಸಂತೆ ನಾರಾಯಣಸ್ವಾಮಿ ಅವರು ಸಾಹಿತಿ, ತೋಟಗಾರಿಕಾ ತಜ್ಞ, ಇತಿಹಾಸ ಸಂಶೋದಕ, ವಾಸ್ತುಶಿಲ್ಪ ಅಧ್ಯಯನಾಸಕ್ತ, ಪರಿಸರ ತಜ್ಞ, ಅನುವಾದಕರು. ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ ವಿದ್ಯಾಸಂಸ್ಥೆಯ ಟ್ರಸ್ಟಿ ಸಂತೆ ನಾರಾಯಣಸ್ವಾಮಿ ಅವರು ಮೊಘಲ್ ರಾಜಕುಮಾರಿ ಕುರಿತಂತೆ ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿರುವ “ಜಹನಾರಾ” ಕೃತಿಗೆ ಬಿ.ಎಂ.ಶ್ರೀ ಪ್ರತಿಷ್ಠಾನದ “ಶಾ.ಬಾಲೂರಾವ್ ಅನುವಾದ ಪ್ರಶಸ್ತಿ” ಪುರಸ್ಕೃತರಾಗಿದ್ದಾರೆ.
ಭಕ್ತರಹಳ್ಳಿಯ ಸಂತೆ ನಾರಾಯಣಸ್ವಾಮಿ ಅವರು ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ ಕೃಷಿಕ ಕುಟುಂಬದಲ್ಲಿ ಜನಿಸಿದವರು. ಚಿಕ್ಕ ವಯಸ್ಸಿನಿಂದಲೇ ಇತಿಹಾಸದ ಬಗ್ಗೆ ಬಹಳ ಕುತೂಹಲವುಳ್ಳವರಾಗಿ ಪುಸ್ತಕ ಪ್ರೇಮಿಯಾಗಿದ್ದಾರೆ. ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರರಾದ ಇವರು ಲಾಲ್ ಬಾಗ್ ನ ನಿವೃತ್ತ ತೋಟಗಾರಿಕಾ ಉಪ ನಿರ್ದೇಶಕರು. ಗಾಂಧಿಭವನ, ಬೆಂಗಳೂರು ವಿಶ್ವವಿದ್ಯಾಲಯ, ಚೌಡಯ್ಯ ಮೆಮೋರಿಯಲ್ ಉದ್ಯಾನವನದ ಸಲಹೆಗಾರರು. ಲಾಲ್ ಬಾಗ್ ಉದ್ಯಾನದ ಸಸ್ಯಗಳ ಬಗ್ಗೆ, ರಾಜಭವನದ ಬಗ್ಗೆ, ಬೆಂಗಳೂರು ನಗರ, ಅದರ ಹೂ ಮರಗಳ ಬಗ್ಗೆ ಅಧ್ಯಯನ ಮಾಡಿ ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಅವರು ವೃತ್ತಿಯಲ್ಲಿ ಸಸ್ಯಶಾಸ್ತ್ರಜ್ಞರಾಗಿದ್ದರೂ ಪ್ರವೃತ್ತಿಯಲ್ಲಿ ಇತಿಹಾಸಕಾರ, ಪ್ರಕೃತಿ ಪ್ರವಾಸಪ್ರಿಯ, ಅಧ್ಯಯನನಿರತರು. ಜಹನಾರಳ ಆತ್ಮಕಥೆಯುಳ್ಳ ಆಂಗ್ಲ ಆವೃತ್ತಿಯನ್ನು ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ.
ನಲ್ಲೂರ್ ಹುಣಿಸೆತೋಪು,ಸರ್ ಮಾರ್ಕ್‌ಕಬ್ಬನ್ (ವ್ಯಕ್ತಿ ಚಿತ್ರ), ಜ್ಯುಯಲ್ ಆಫ್ ಲಾಲ್‌ಬಾಗ್, ಗೋಲ್ಡ್ ಟ್ರಾಕ್ – ಕೃಷಿ ಕಾಲೇಜು ಬಗ್ಗೆ ಐತಿಹಾಸಿಕ ಪುಸ್ತಕ, ರಾವ್ ಬಹದ್ದೂರ್ ಎಚ್.ಸಿ. ಜವರಾಯ ವ್ಯಕ್ತಿಚಿತ್ರ, ಲಾಲ್‌ಬಾಗ್ ಪುಷ್ಪ ಪ್ರದರ್ಶನ, ಸರ್ ಮಾರ್ಕ್ ಕಬ್ಬನ್, ಶತ ಸಂಭ್ರಮ- ಸಚಿತ್ರ ಪುಸ್ತಕ, ಮೈಸೂರು ಉದ್ಯಾನ ಕಲಾ ಸಂಘ ಬಗ್ಗೆ ಪುಸ್ತಕ, ಕರ್ನಲ್ ವಿಲ್ಕ್ಸ್, ಬೆಂಗಳೂರು ಬೆಳೆದು ಬಂದ ಇತಿಹಾಸ, ಕೃಂಬಿಗಲ್ – ವ್ಯಕ್ತಿಚಿತ್ರ, ಬ್ಲಾಸಮ್ಸ್ ಆಫ್ ಬೆಂಗಳೂರು (ಅಂದಿನ ಮುಖ್ಯ ಕಾರ್ಯದರ್ಶಿಯ ಟಿ.ಪಿ. ಎಸ್ಸಾರ್ ಅವರೊಂದಿಗೆ ಪುಸ್ತಕ ರಚನೆ), ವೃಕ್ಷಪಾಲನೆ ಬಗ್ಗೆ ಸ್ಮರಣ ಸಂಚಿಕೆ, ಚಿತ್ರಕಲಾ ಪರಿಷತ್ – ಬೆಂಗಳೂರು, ಇದರ ಬಗ್ಗೆ ಕೈಪಿಡಿ, ರಾಜಭವನ – ಬೆಂಗಳೂರು ನಡೆದು ಬಂದ ದಾರಿ, ಕಬ್ಬನ್ ಪಾರ್ಕ್ ಬಗ್ಗೆ ಕೈಪಿಡಿ ಸೇರಿದಂತೆ ಹಲವು ಕೃತಿಗಳನ್ನು ಭಕ್ತರಹಳ್ಳಿಯ ಸಂತೆ ನಾರಾಯಣಸ್ವಾಮಿ ಅವರು ರಚಿಸಿದ್ದಾರೆ.
ಲಾಲ್‌ಬಾಗ್ ಗಾಜಿನ ಮನೆ ಶತಮಾನೊತ್ಸವ ಕಾರ್ಯಕ್ರಮ ಮಾಡುವಲ್ಲಿ ಮುಖ್ಯ ಪಾತ್ರವಹಿಸಿದ್ದ ಭಕ್ತರಹಳ್ಳಿಯ ಸಂತೆ ನಾರಾಯಣಸ್ವಾಮಿ ಅವರು, ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ ಆವರಣದಲ್ಲಿ ಮೂರು ಲಕ್ಷ ಗಿಡನೆಟ್ಟು, ಈ ಬಗ್ಗೆ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ್ದಾರೆ, ಲಾಲ್‌ಬಾಗ್ ಪುಷ್ಪ ಪ್ರದರ್ಶನ ಬಗ್ಗೆ ಬೆಲ್ಜಿಯಂ ದೇಶದ ರಾಜಧಾನಿ ಬ್ರಸೆಲ್ಸ್‌ನಲ್ಲಿ ಪ್ರಬಂಧ ಮಂಡನೆ ಮಾಡಿರುವ ಇವರು, ನಲ್ಲೂರು ಹುಣಿಸೆತೋಪು 54 ಎಕರೆ ಪ್ರದೇಶವನ್ನು ರಾಷ್ಟ್ರೀಯ ಪಾರಂಪರಿಕಾ ತಾಣವನ್ನು ಮಾಡಲು ಸರ್ಕಾರದ ಘೋಷಣೆಯಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ. ನಿವೃತ್ತಿ ನಂತರ ಕೃಂಬಿಗಲ್‌ರ ಬಗ್ಗೆ ಅಂತರರಾಷ್ಟ್ರೀಯ ಪ್ರದರ್ಶನ ಜರ್ಮನಿಯ ಡ್ರೆಸ್‌ಡೆನ್ ಅಲ್ಲಿ ಮಾಡಲು ಮುಖ್ಯಪಾತ್ರ ಕೂಡ ವಹಿಸಿದ್ದರು.