Sidlaghatta : ಶಿಡ್ಲಘಟ್ಟ ನಗರದ ವಾಸವಿ ಪ್ರೌಢಶಾಲೆಯಲ್ಲಿ (Vasavi High School) ಶನಿವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು (Kannada Sahitya Parishat) ವತಿಯಿಂದ ಆಯೋಜಿಸಿದ್ದ ದತ್ತಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ವಾಸವಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗೋಪಿನಾಥ್ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪುರಾತನ ಕಾಲದಿಂದಲೂ ಅತ್ಯಂತ ವೈಭವೋಪೇತವಾಗಿ ಬೆಳೆದು ಬಂದಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಇದನ್ನು ಉಳಿಸಿ ಬೆಳೆಸಲು ಅಭಿಮಾನದಿಂದ ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ವ್ಯವಹಾರಿಕ ಜ್ಞಾನಕ್ಕಾಗಿ ಬೇರೆ ಭಾಷೆ ಬಳಸಿ, ಆದರೆ ಮಾತೃಭಾಷೆಯಾಗಿ ಕನ್ನಡ ಭಾಷೆಯನ್ನು ಯಾವತ್ತಿಗೂ ಮರೆಯಬಾರದು. ಆದ್ದರಿಂದ ವಿದ್ಯಾರ್ಥಿಗಳು ಭಾಷೆಯ ಬಗ್ಗೆ ಅಭಿಮಾನ ಹೊಂದಬೇಕೆಂದು ಎಂದು ತಿಳಿಸಿದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್ ಮಾತನಾಡಿ, ಹಿರಿಯರ ನೆನಪಿನಲ್ಲಿ ಮತ್ತು ಭಾಷೆಯ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ಮಾಡಲು ವಿವಿಧ ರೀತಿಯ ದತ್ತಿಗಳ ಮುಖಾಂತರ ಸ್ಪರ್ಧೆ ಆಯೋಜಿಸಿ ವಿಜೇತರಾದವರಿಗೆ ಪುಸ್ತಕ , ಪ್ರಮಾಣ ಪತ್ರ ಮತ್ತು ಪೆನ್ ಬಹುಮಾನವಾಗಿ ಶಿಡ್ಲಘಟ್ಟ ಕಸಾಪ ವತಿಯಿಂದ ನೀಡಲಾಗುತ್ತಿದೆ ಎಂದರು.
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಾನಪದ ಗೀತೆ ಗಾಯನ ಸ್ಪರ್ಧೆ, ಜಿಲ್ಲಾ ಮಟ್ಟದ ಕವಿಗೋಷ್ಟಿ ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕರಿಗೆ ಸನ್ಮಾನವನ್ನು ಮಾಡಲಾಯಿತು.
ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ನಿಕಟಪೂರ್ವ ಅಧ್ಯಕ್ಷ ಎ.ಎಂ.ತ್ಯಾಗರಾಜ್, ರೂಪಸಿ ರಮೇಶ್, ಶ್ರೀನಿವಾಸಮೂರ್ತಿ, ಕಸಾಪ ಪದಾಧಿಕಾರಿಗಳಾದ ಸತೀಶ್, ಮುನಿಯಪ್ಪ, ಸದಸ್ಯರಾದ ಹೇಮಾವತಿ, ಮಾಲತಿ, ಹರೀಶ್, ವಾಸವಿ ಪ್ರೌಢಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.