Sidlaghatta : ಶಿಡ್ಲಘಟ್ಟ ನಗರದ ARM PU College ನಲ್ಲಿ (Sri Sharada Convent) ಗುರುವಾರ ತಾಲ್ಲೂಕು ಕಸಾಪ (Kannada Sahitya Parishat) ವತಿಯಿಂದ ಆಯೋಜಿಸಿದ್ದ “ಪುಸ್ತಕ ಪರಿಚಯ” ಕಾರ್ಯಕ್ರಮದಲ್ಲಿ ಪಶುವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಕೆ.ರಮೇಶ್ ಅವರು ತಮ್ಮ ವೃತ್ತಿ ಬದುಕಿನ ಅನುಭವಗಳ ಕೃತಿ “ಮೆಲುಕು” (Meluku) ಕುರಿತಾಗಿ ಪಶುಪಾಲನಾ ಮತ್ತು ಮಾತನಾಡಿದರು.
“ಅನ್ಯವೃತ್ತಿಗಿಂತ ಈ ಪಶುವೈದ್ಯಕೀಯ ವೃತ್ತಿಯಲ್ಲಿ ಎದುರಿಸಬಹುದಾದ ಸವಾಲುಗಳು, ಕಷ್ಟ ಕಾರ್ಪಣ್ಯಗಳು ಮತ್ತು ವೃತ್ತಿಯಲ್ಲಿರುವ ಆತ್ಮತೃಪ್ತಿ, ಇತರರಿಗೂ ಮನವರಿಕೆಯಾಗಲಿ ಎನ್ನುವ ಅಭಿಲಾಷೆ ನನ್ನದು. ಈ ಉದ್ದೇಶದಿಂದ ನನ್ನ ವೃತ್ತಿ ಬದುಕಿನಲ್ಲಿ ನಡೆದಿರುವ ಹಲವು ನೈಜ ಸಂಗತಿಗಳನ್ನು ಈ ಪುಸ್ತಕದಲ್ಲಿ ದಾಖಲಿಸಿರುವೆ” ಎಂದು ಅವರು ತಿಳಿಸಿದರು.
“ಸಾಮಾನ್ಯ ಮನುಷ್ಯರಿಗೂ ಕೇಳಿಸದ ಕೆಲವು ಶಬ್ದಗಳನ್ನು ಪ್ರಾಣಿ ಪಕ್ಷಿಗಳು ಗ್ರಹಿಸಬಲ್ಲವು. ಆದರೆ ಅವುಗಳ ದೇಹ ಮನಸ್ಸನ್ನು ಅರ್ಥಮಾಡಿಕೊಂಡು ಚಿಕಿತ್ಸೆ ಮಾಡುವವರೇ ನಿಜವಾದ ಪಶುವೈದ್ಯರು” ಎಂದು ಅವರು ಹೇಳಿದರು.
ಪ್ರಾಣಿಗಳ ಲೋಕದಲ್ಲಿ ಪ್ರವೇಶ ಮಾಡಿ, ಹಸು, ಕರು, ಎಮ್ಮೆ ಮುಂತಾದ ಮೂಕಜೀವಿಗಳ ಚಿಕಿತ್ಸೆ ನೀಡುವಾಗ, ಈ ಪ್ರಾಣಿಗಳನ್ನೇ ತಮ್ಮ ಕರುಳ ಕುಡಿಗಳಾದ ಮಕ್ಕಳಿಗಿಂತಲೂ ಜೋಪಾನ ಮಾಡುವ ಹಳ್ಳಿಗಾಡಿನ ಜನರನ್ನು ಕಂಡೆ. ಇತ್ತ ಮೂಕ ಜೀವಿಗಳ ಜೊತೆಯಲ್ಲಿ ಅತ್ತ ಪಾಲಕರ ಜೊತೆಯಲ್ಲಿ ವ್ಯವಹರಿಸುತ್ತಾ ಪಡೆದ ಅನುಭವಗಳೆಲ್ಲವೂ ನನ್ನ ಬದುಕಿನ ಅಮೂಲ್ಯ ಸಂಪತ್ತು. ಮಮತೆ, ಕರುಣೆ ಮತ್ತು ಜವಾಬ್ದಾರಿಯಿಂದ ತನ್ನ ಕೆಲಸವನ್ನು ಮಾಡುವುದರಿಂದ ಅವನ ವೈಯಕ್ತಿಕ ಬದುಕು ಸಾರ್ಥಕ ಗೊಳ್ಳುತ್ತದೆ ಮತ್ತು ಜನಸಮುದಾಯಕ್ಕೆ ಒಳಿತಾಗುತ್ತದೆ ಎಂದರು.
“ಎತ್ತುಗಳಿಗೂ ಮನಸ್ಸಿರುತ್ತೆ, ಭಯನೂ ಇರುತ್ತೆ. ನೀನು ಆ ಎಮ್ಮೆಗಳ ನೋವಿಗೆ ಮದ್ದುಕೊಡೋ ಡಾಕ್ಟರ್ ಆಗಿದ್ದೀಯ. ಅವುಗಳಿಗೆ ಮೋಸ ಮಾಡಬೇಡಪ್ಪಾ” ಎಂಬ ತನ್ನ ತಾಯಿಯವರ ಹಿತನುಡಿ ತನ್ನ ವೃತ್ತಿಬದುಕಿನಲ್ಲಿ ಜತನವಾಗಿ ಕಾಪಾಡಿಕೊಂಡಿದ್ದೇನೆ ಎಂದರು.
ಶಿಡ್ಲಘಟ್ಟ ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಮೂಲತಃ ಮಂಡ್ಯ ಜಿಲ್ಲೆಯವರಾದ ಡಾ.ಬಿ.ಕೆ.ರಮೇಶ್ ಅವರು ನಮ್ಮ ತಾಲ್ಲೂಕಿನಲ್ಲಿ ಪಶುವೈದ್ಯರಾಗಿ ಪ್ರಖ್ಯಾತರು. ಅವರು ತಮ್ಮ ಪಶುವೈದ್ಯಕೀಯ ವೃತ್ತಿಯ ಸವಿಯನ್ನು ತಮ್ಮ ಆಸಕ್ತಿಕರ ಬರಹಗಳ ಮೂಲಕ ನಮ್ಮೆಲ್ಲರಿಗೆ ಉಣಬಡಿಸಿದ್ದಾರೆ. ಇವರ ಪುಸ್ತಕವು ಪಶುವೈದ್ಯರಿಗೆ ಮತ್ತು ಸಾಮಾನ್ಯ ಜನರಿಗೆ ಇಬ್ಬರಿಗೂ ಆಪ್ತವಾಗುವಂತಿವೆ. ಇವರು ಪತ್ರಿಕೆ, ಟಿವಿ, ರೇಡಿಯೋ ಮಾಧ್ಯಮಗಳಲ್ಲಿ ಇಲಾಖಾ ತಾಂತ್ರಿಕ ವಿಚಾರಗಳನ್ನು ಮಂಡಿಸಿದ್ದಾರೆ. ಅನೇಕ ಶಾಲಾ ಕಾಲೇಜುಗಳಲ್ಲಿ ಪ್ರಾಣಿಜನ್ಯ ರೋಗಗಳ ಬಗ್ಗೆ, ಪ್ರಾಣಿ ಪಕ್ಷಿಗಳ ಮತ್ತು ಮನುಷ್ಯ ಸಂಬಂದ ಕುರಿತು ಉಪನ್ಯಾಸ ನೀಡಿದ್ದಾರೆ ಎಂದು ಹೇಳಿದರು.
ಕಸಾಪ ನಿಕಟ ಪೂರ್ವ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಹಳ್ಳಿ ಗಾಡಿನ ಬದುಕು, ಪಶುವೈದ್ಯರ ಕೆಲಸದ ಬಗ್ಗೆ ಮಾತಾಡಿದರು. ಕಸಾಪ ವತಿಯಿಂದ ಡಾ.ಬಿ.ಕೆ ರಮೇಶ್ ರವರನ್ನು ಸನ್ಮಾನಿಸಲಾಯಿತು. ಡಾ.ಬಿ.ಕೆ.ರಮೇಶ್ ಅವರು ತಮ್ಮ “ಮೆಲುಕು” ಪುಸ್ತಕಗಳನ್ನು ಕಾಲೇಜು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.
ಪ್ರಾಂಶುಪಾಲ ಮೂರ್ತಿ ಸಾಮ್ರಾಟ್, ಶಾರದಾ ವಿದ್ಯಾಸಂಸ್ಥೆ ಅಧ್ಯಕ್ಷ ಎ.ಆರ್.ಮುನಿರತ್ನಂ, ಕಸಾಪ ಸದಸ್ಯ ನಾಗೇಶ್, ಉಪನ್ಯಾಸಕರಾದ ನಾಗೇಶ್, ದೇವರಾಜ್, ಬಾಲಾಜಿ, ಆಶಾ, ನವೀನ್ ಕುಮಾರ್, ಪೃಥ್ವಿ, ಆರೀಫ್, ರವಿಕುಮಾರ್ ಮತ್ತು ವೆಂಕಟರವಣಸ್ವಾಮಿ ಹಾಜರಿದ್ದರು.