ಶಿಡ್ಲಘಟ್ಟ ತಾಲ್ಲೂಕು ಕಸಾಪ ವತಿಯಿಂದ ನಗರದ 21 ನೇ ವಾರ್ಡನ ಗಂಗಮ್ಮ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 108 ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಎಂ.ಚಂದ್ರಪ್ಪ ಅವರು ಮಾತಾಡಿದರು.
ಕನ್ನಡವು ನಮ್ಮ ಬದುಕಿನ ಭಾಗ. ನಮ್ಮ ಆಲೋಚನೆ, ಸಂಸ್ಕಾರ, ಸಂಸ್ಕೃತಿ, ಜೀವನ ಶೈಲಿ, ಬದುಕು, ಬರಹ ಎಲ್ಲೆಡೆಯೂ ಕನ್ನಡವಿದೆ. ಕನ್ನಡ ನಮ್ಮ ಅಸ್ಮಿತೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಭವ್ಯವಾದ ಇತಿಹಾಸವಿದ್ದು, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ಮತ್ತು ಕಲೆಗೆ ಪ್ರೋತ್ಸಾಹಿಸುತ್ತಿದೆ. ಕಸಾಪ ಸಂಸ್ಥಾಪಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿ ರವರ ಕಲ್ಪನೆ ಮತ್ತು ಆಶಯಗಳನ್ನು ಎಲ್ಲಾ ಕನ್ನಡಿಗರು ಸಾಕಾರಗೊಳಿಸಬೇಕು ಎಂದು ಅವರು ತಿಳಿಸಿದರು.
“ಕನ್ನಡ ಮನಸ್ಸುಗಳ ಮೇಲೆ ಕಸಾಪ ಬೀರಿದ ಪ್ರಭಾವ” ಎಂಬ ವಿಷಯ ಬಗ್ಗೆ ಸಾಹಿತಿ ಪಾ.ಮು. ಚಲಪತಿಗೌಡ ಮಾತನಾಡಿ, ಕಸಾಪ ಸಂಸ್ಥಾಪಕರ ಬಗ್ಗೆ, ಇತಿಹಾಸ, ಕನ್ನಡ ಭಾಷೆಗೆ ನೀಡಿದ ಕೊಡುಗೆಗಳ ಬಗ್ಗೆ ವಿವರಿಸಿದರು. ಪುಸ್ತಕ ಪ್ರಕಟಣೆ, ಅಖಿಲ ಭಾರತ ಸಮ್ಮೇಳನ, ಜಿಲ್ಲಾ ಮತ್ತು ತಾಲ್ಲೂಕು ಸಮ್ಮೇಳನ ಆಯೋಜಿಸಿ ಎಲ್ಲಾ ಕನ್ನಡಿಗರನ್ನು ಕಸಾಪ ಒಗ್ಗೂಡಿಸುತ್ತಿದೆ ಎಂದರು.
ಕಸಾಪ ಅನೇಕ ದತ್ತಿ ಗಳನ್ನು ಸ್ಥಾಪನೆ ಮಾಡಿದೆ, ನೂರಾರು ಸಾಧಕರನ್ನು ಗುರುತಿಸಿ ಸನ್ಮಾನಿಸಿದೆ, ಭಾಷೆಯ ಇತಿಹಾಸದ ಬಗ್ಗೆ ಪುಸ್ತಕಗಳನ್ನು ಪ್ರಕಟಿಸಿದೆ, ನಿಘಂಟುಗಳನ್ನು ಮುದ್ರಿಸಿದೆ ಎಂದು ವಿವರಿಸಿದರು.
ಅವಿಭಜಿತ ಕೋಲಾರ ಜಿಲ್ಲೆಯ ಕೊಡುಗೆ ಸಾಹಿತ್ಯ ಕ್ಷೇತ್ರ ಮತ್ತು ಕಸಾಪಗಿದೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿ.ವಿ.ಜಿ, ತಿ.ತಾ.ಶರ್ಮ, ಬಸವಾರಾಧ್ಯ ಮುಂತಾದವರ ಕೊಡುಗೆ ಸ್ಮರಣೀಯವಾಗಿದೆ ಎಂದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಕಸಾಪ 108 ನೇ ಸಂಸ್ಥಾಪನಾ ದಿನ ಅರ್ಥಪೂರ್ಣವಾಗಿ ಇಡೀ ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಸಂಸ್ಥಾಪಕರ ಆಶಯಗಳನ್ನು ಗೌರವಿಸುತ್ತ ಅದರಂತೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಯ ಬಗ್ಗೆ ಕಾರ್ಯಕ್ರಮಗಳನ್ನು ಆಯೋಜಿಸಿ ಶಿಡ್ಲಘಟ್ಟ ತಾಲ್ಲೂಕಿನ ಎಲ್ಲಾ ಕಡೆಗೂ ಪರಿಷತ್ತು ಕೊಂಡೊಯ್ಯವ ಕೆಲಸ ಮಾಡಲಾಗುವುದು ಎಂದರು.
ಸಂಸ್ಥಾಪನಾ ದಿನದ ಅಂಗವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಸಿಹಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಎಂ.ಚಂದ್ರಪ್ಪ, ಸಾಹಿತಿ ಪಾ.ಮು.ಚಲಪತಿಗೌಡ, ನಗರಸಭೆ ಸದಸ್ಯೆ ಸುಗುಣ ಲಕ್ಷ್ಮೀ ನಾರಾಯಣ, ಸಹಾಯಕ ಖಜಾನಾಧಿಕಾರಿ ಡಿ.ಕೆ.ಮೋಹನ್ ಅವರನ್ನು ಸಂಸ್ಥಾಪನಾ ದಿನದ ಅಂಗವಾಗಿ ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಕಸಾಪ ಗೌರವ ಕಾರ್ಯದರ್ಶಿ ಕೆ.ಮಂಜುನಾಥ್, ಸಾಂಸ್ಕೃತಿಕ ಕಾರ್ಯದರ್ಶಿ ಪುನೀತ್ ಕುಮಾರ್, ಪರಿಶಿಷ್ಟ ಜಾತಿ ಪ್ರತಿನಿಧಿ ಮುನಿಯಪ್ಪ, ಸಾಂಸ್ಕೃತಿಕ ಕಾರ್ಯದರ್ಶಿ ಬಿ.ಇ.ನಾಗೇಶ್, ನಗರ ಘಟಕದ ಅಧ್ಯಕ್ಷ ಕಿರಣ್ ಕುಮಾರ್, ಕಸಾಪ ಸದಸ್ಯರಾದ ಲಕ್ಷ್ಮೀ ನಾರಾಯಣ, ಗುರುರಾಜರಾವ್, ಶಶಿಕಾಂತ್, ನಂಜುಂಡಮೂರ್ತಿ, ನಾಗೇಶ್, ಸೂರ್ಯಪ್ರಕಾಶ್, ವೈಶಾಖ್, ಮುನಿರಾಜು, ಮಂಜುನಾಥ್ ಹಾಜರಿದ್ದರು.