Sidlaghatta : ಆಲೂರು ವೆಂಕಟರಾಯರ ಐದು ದಶಕಗಳ ಹೋರಾಟದ ಫಲದಿಂದ ಕರ್ನಾಟಕ ಏಕೀಕರಣವಾಯಿತು. ಅವರ “ನನ್ನ ಜೀವನದ ಸ್ಮೃತಿ ಗಳು” ಪುಸ್ತಕವನ್ನು ಕನ್ನಡಿಗರೆಲ್ಲರೂ ಓದಬೇಕು. ಅವರ ಹೋರಾಟ ಮತ್ತು ಆಗಿನ ಕಾಲಘಟ್ಟ ಕಣ್ಣ ಮುಂದೆ ಬರುತ್ತದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ನಗರದ ARM PU College ನಲ್ಲಿ ಶುಕ್ರವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ (Kannada Sahitya Parishat) ವತಿಯಿಂದ ಆಯೋಜಿಸಿದ್ದ “ಕರ್ನಾಟಕ ಏಕೀಕರಣ ಇತಿಹಾಸ” ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಕಾಲೇಜಿನ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅವರು ಮಾತನಾಡಿದರು.
ಆಲೂರು ವೆಂಕಟರಾಯರು ಕನ್ನಡ ಭಾಷೆಯನ್ನಾಡುವ ಪ್ರದೇಶಗಳು ಐದು ಭೂ ಭಾಗಗಳಾಗಿ ಹಂಚಿ ಹೋಗಿರುವುದನ್ನು ನೆನೆದು ವ್ಯಥೆಪಟ್ಟರು. ಕನ್ನಡ ಭೂಮಿಯನ್ನು ಏಕೀಕರಿಸಿ ಅಖಂಡ ಕರ್ನಾಟಕವನ್ನು ಕಟ್ಟುವ ಕನಸನ್ನು ಕಂಡರು. 13 ವರ್ಷಗಳ ಕಾಲ ಕನ್ನಡ ಭಾಷೆಯನ್ನಾಡುತ್ತಿದ್ದ ಅಷ್ಟೂ ಪ್ರದೇಶಗಳ ತುಂಬಾ ಪ್ರವಾಸ ಮಾಡಿದರು. ಕರ್ನಾಟಕ ಇತಿಹಾಸಕ್ಕೆ ಸಂಬಂಧ ಪಟ್ಟ ಸ್ಥಳಗಳಿಗೆ ಬೇಟಿಕೊಟ್ಟರು, ಶಾಸನಗಳನ್ನು ಓದಿದರು, ನಾಣ್ಯಗಳನ್ನು ಸಂಗ್ರಹಿಸಿದರು, ತಾಳೆಗರಿಗಳನ್ನು ಅಧ್ಯಯನ ಮಾಡಿದರು, ಕರ್ನಾಟಕ ಜಾನಪದ,ಇತಿಹಾಸ, ಕಲೆ, ಸಂಗೀತ, ದೇವಾಲಯಗಳು, ವಾಣಿಜ್ಯ ವ್ಯವಹಾರ, ಸಾಹಿತ್ಯ ಮತ್ತು ಭಾಷೆಯನ್ನು ವಿಸ್ತೃತವಾಗಿ ವಿವರಿಸುವ “ಕರ್ನಾಟಕ ಗತವೈಭವ” ಮಹಾಗ್ರಂಥ ಬರೆದು ಪ್ರಕಟಿಸಿದರು. ಆಮೂಲಕ ಕನ್ನಡಿಗರನ್ನು ಜಾಗೃತಗೊಳಿಸಿದರು ಎಂದು ವಿವರಿಸಿದರು.
ಹಲವಾರು ಲೇಖಕರಿಂದ ಪುಸ್ತಕಗಳನ್ನು ಬರೆಸಿ, ಆ ಪುಸ್ತಕಗಳನ್ನು ತಾವೇ ಪ್ರಕಟಿಸಿ, ತಲೆ ಮೇಲೆ ಹೊತ್ತು ಊರೂರು ಸುತ್ತಿ ಮಾರಿದರು. ಆಲೂರು ವೆಂಕಟರಾಯರ ಐದು ದಶಕಗಳ ಹೋರಾಟದ ನಂತರ ಕರ್ನಾಟಕ ಏಕೀಕರಣವಾಯಿತು. ಅವರನ್ಬು ಕನ್ನಡದ ಕುಲ ಪುರೋಹಿತ ಎಂದು ಕರೆಯುತ್ತಾರೆ ಎಂದರು.
ನಾನು ಕನ್ನಡಿಗ , ಕರ್ನಾಟಕ ನನ್ನದು ಎಂಬ ಸದ್ವಿಚಾರ ತರಂಗಗಳಂದ ಯಾವನ ಹೃದಯವು ಪುಳಕಿತಗೊಳ್ಳುವುದುಲ್ಲವೋ , ಇಂತಹ ವಿಷಮ ಸ್ಥಿತಿಯಲ್ಲಿ ಹೃದಯವು ತಲ್ಲಣಿಸುವುದಿಲ್ಲವೋ, ರೋಮರಂದ್ರಗಳಲ್ಲಿ ಕೂಡ ಕರ್ನಾಟಕವೆಂದು ಸೊಲ್ಲು ಹೊರಡುವುದಿಲ್ಲವೋ ಅದು ಹೃದಯವಲ್ಲ, ಕಲ್ಲಿನ ಬಂಡೆ, ದೇಹವಲ್ಲ, ಮೋಟು ಮರ ! ಎಂದು ಆಲೂರು ವೆಂಕಟರಾಯರು ಸದಾ ಭಾಷಣಗಳಲ್ಲಿ ಹೇಳತ್ತಿದ್ದರು ಎಂದರು.
ಎ.ಆರ್.ಎಂ.ಪಿಯು ಕಾಲೇಜಿನ ಪ್ರಾಂಶುಪಾಲ ಮೂರ್ತಿ ಸಾಮ್ರಾಟ್ ಮಾತನಾಡಿ, ಕನ್ನಡಿಗರು ತಮ್ಮ ಮಾತೃಭಾಷೆಯನ್ನು ಪ್ರೀತಿಸಬೇಕು. ನಮ್ಮ ಭಾಷೆಯ ಮಹತ್ವವನ್ನು ಎಲ್ಲಾ ಕಡೆಯೂ ಸಾರಬೇಕು. ಕನ್ನಡ ಸಾಹಿತ್ಯದ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದಬೇಕೆಂದರು.
ಕಸಾಪ ವತಿಯಿಂದ ಕರ್ನಾಟಕ ಏಕೀಕರಣ ಇತಿಹಾಸದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಡಿ.ಎಸ್.ರೂಪ (ಪ್ರಥಮ), ಎಸ್.ನಾಗರತ್ನ (ದ್ವಿತೀಯ), ಜಿ.ಗೋವರ್ಧನ್ (ತೃತೀಯ) ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ಶಾರದಾ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಶ್ರೀಕಾಂತ್, ಪ್ರಾಂಶುಪಾಲ ಕೆ. ಮೂರ್ತಿ ಸಾಮ್ರಾಟ್, ಕಲಾ ವಿಭಾಗದ ಮುಖ್ಯಸ್ಥ ವಿ.ದೇವರಾಜ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಸಿ.ನಾಗೇಶ್, ಉಪನ್ಯಾಸಕ ರವಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.