ಸರ್ಕಾರ ತಮ್ಮ ರಾಜಕೀಯ ಲಾಭಕ್ಕಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಿದ್ದು ಕೂಡಲೇ ಇದನ್ನು ಕೈಬಿಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎ.ನಾಗರಾಜ್ ತಿಳಿಸಿದರು.
ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ವಿರೋಧಿಸಿ ರಾಜ್ಯಾದ್ಯಂತ ಬಂದ್ ಆಚರಿಸುತ್ತಿರುವ ಹಿನ್ನಲೆಯಲ್ಲಿ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ತಾಲ್ಲೂಕು ಕಚೇರಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.
ರಾಜ್ಯದ ಸುಮಾರು ಆರೂವರೆ ಕೋಟಿ ಕನ್ನಡಿಗರ ಭಾವನೆಗಳನ್ನು ಬದಿಗಿಟ್ಟು ಕೇವಲ ತಮ್ಮ ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಸರ್ಕಾರ ಮರಾಠ ಅಭಿವೃದ್ದಿ ಪ್ರಾಧಿಕಾರ ರಚಿಸಿದೆ. ಸಾಲದ್ದಕ್ಕೆ ತಾವು ಮಾಡಿರುವ ಕೆಲಸವನ್ನು ಸಮರ್ಥಿಸಿಕೊಳ್ಳಲು ತಮ್ಮದೇ ಪಕ್ಷದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ರಿಂದ ಕನ್ನಡ ಪರ ಸಂಘಟನೆಗಳು ಹಾಗೂ ಹೋರಾಟಗಾರರನ್ನು ಅವಮಾನಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ ಎಂದರು.
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯ ವಿಚಾರವನ್ನು ಕೂಡಲೇ ಸರ್ಕಾರ ಕೈ ಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಹೋರಾಟಗಳನ್ನು ರೂಪಿಸಲಾಗುವುದು ಎಂದು ಎಚ್ಚರಿಸಿ ತಹಶೀಲ್ದಾರ್ ಕೆ.ಅರುಂದತಿ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಕರವೇ ಜಿಲ್ಲಾ ಉಪಾಧ್ಯಕ್ಷ ತಮೀಮ್ ಅನ್ಸಾರಿ, ತಾಲ್ಲೂಕು ಕಾರ್ಯದರ್ಶಿ ನಾಗರಾಜ್, ನಗರಾಧ್ಯಕ್ಷ ಅಕ್ರಂಪಾಷ, ಪದಾಧಿಕಾರಿಗಳಾದ ನ್ಯಾಮತ್‌ಉಲ್ಲಾ, ಅಖಿಲ್‌ಖಾನ್, ಇಶ್ರತ್ ಖಾನ್, ಶ್ರೀನಾಥ್ ಹಾಜರಿದ್ದರು.