Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸಮಾನ ಮನಸ್ಕರ ಹೋರಾಟ ಸಮಿತಿ ವತಿಯಿಂದ ನವೆಂಬರ್ 1 ರ ಬುಧವಾರದಂದು 67 ನೇ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಸಮಿತಿಯ ವಿಸ್ಡಂ ನಾಗರಾಜ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ನಗರದ ಬಸ್ ನಿಲ್ದಾಣದ ಬಳಿ ಧ್ವಜಾರೋಹಣ ಮಾಡಿ, 150 ಅಡಿ ಉದ್ದದ ಕನ್ನಡ ಧ್ವಜವನ್ನು ಮೆರವಣಿಗೆ ಮಾಡಲಾಗುವುದು. ಜಾನಪದ ನೃತ್ಯ ಕಲಾ ತಂಡಗಳು, ಐವತ್ತು ಕಳಶಗಳನ್ನು ಹೊತ್ತ ಹೆಣ್ಣುಮಕ್ಕಳು, ಕನ್ನಡ ಬಾವುಟ ಹಿಡಿದ 200 ಮಕ್ಕಳು ಮತ್ತು ತಾಯಿ ಭುವನೇಶ್ವರಿ ಹೊತ್ತ ಪಲ್ಲಕ್ಕಿಗಳ ಅದ್ದೂರಿ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ.
ಸಮಾನ ಮನಸ್ಕರ ಹೋರಾಟ ಸಮಿತಿಯ ಸದಸ್ಯ ರಾಮಾಂಜಿ ಮಾತನಾಡಿ, ಮಧ್ಯಾಹ್ನ ಒಂದು ಗಂಟೆಗೆ ಕೋಟೆ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮವಿದ್ದು, ಹತ್ತು ಮಂದಿ ಸಾಧಕರಿಗೆ ಮತ್ತು ಹತ್ತು ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು.
ಸಂಜೆ ಐದು ಗಂಟೆಗೆ ಡಾ.ಪುನೀತ್ ರಾಜ್ ಕುಮಾರ್ ವೇದಿಕೆಯಲ್ಲಿ ರಸಮಂಜರಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ, ರೂಪಕ, ಹಾಡುಗಾರಿಕೆ ಇರುತ್ತದೆ. ನಟ ವಿನೋದ್ ಪ್ರಭಾಕರ್, ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ, ಮಿಮಿಕ್ರಿ ದೀಕ್ಷಿತ್ ಗೌಡ, ಚಿಟ್ನಳ್ಳಿ ರಾಮಚಂದ್ರ, ಉದಯಾ ಕಾಮಿಡಿ ನಟಿ ರಾಜೇಶ್ವರಿ ಮುಂತಾದ ಕಲಾವಿದರು ಆಗಮಿಸಲಿದ್ದಾರೆ ಎಂದು ಹೇಳಿದರು.
ಸಮಾನ ಮನಸ್ಕರ ಹೋರಾಟ ಸಮಿತಿಯ ರವಿಪ್ರಕಾಶ್, ಪ್ರತೀಶ್, ರಾಮಾಂಜಿ, ಮಧುಲತಾ, ಸುನಿಲ್, ನಾರಾಯಣಸ್ವಾಮಿ, ಅರುಣ್, ದೇವಪ್ಪ, ಶ್ರೀರಾಮ್, ದೀಪು ಹಾಜರಿದ್ದರು.