Sidlaghatta : ಶಿಡ್ಲಘಟ್ಟದ ಹೌಸಿಂಗ್ ಬೋರ್ಡ್ ನಿವಾಸಿಯಾದ ಅಜಿತ್ ಕೌಂಡಿನ್ಯ ನಾಗಾರ್ಜುನ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಚಿತ್ರಕಲೆ, ಕಂಪ್ಯೂಟರ್ ಡಿಸೈನಿಂಗ್ ಅವರ ಆಸಕ್ತಿ. ಮುಖಪುಟ ವಿನ್ಯಾಸಗಳ ಮೂಲಕ ತನ್ನ ಸೃಜನಶೀಲತೆಯನ್ನು ಅಭಿವ್ಯಕ್ತಿಸುವ ಹವ್ಯಾಸವನ್ನು ರೂಪಿಸಿಕೊಂಡಿದ್ದಾರೆ. ಸುಮಾರು 300 ಕ್ಕೂ ಹೆಚ್ಚು ಪುಸ್ತಕಗಳ ಮುಖಪುಟ ವಿನ್ಯಾಸ ಮಾಡಿದ್ದಾರೆ.
ಕನ್ನಡ ಸಾಹಿತ್ಯ ಪುಸ್ತಕಗಳಿಗೆ ರೇಖಾಚಿತ್ರಗಳನ್ನು ರಚಿಸಿರುವ ಅಜಿತ್, ಕೆಲ ಮಾಸ ಪತ್ರಿಕೆಗಳಿಗೆ ಕಾನ್ಸೆಪ್ಟ್ ಆರ್ಟ್(ರೇಖಾ ಚಿತ್ರಗಳು) ರಚಿಸಿದ್ದಾರೆ. ಹಲವಾರು ಸಂಸ್ಥೆಗಳಿಗೆ ಲೋಗೋ ವಿನ್ಯಾಸ, ಟಿ-ಶರ್ಟ್ ವಿನ್ಯಾಸ ಕೂಡ ಮಾಡಿಕೊಟ್ಟಿದ್ದಾರೆ. 2015 ರಲ್ಲಿ ಭೂತಾನ್ ದೇಶದ ಎನ್.ಡಬ್ಲ್ಯು.ಸಿ.ಸಿ ಯಲ್ಲಿ ಇವರ ಡಿಜಿಟಲ್ ಚಿತ್ರಗಳ ಪ್ರದರ್ಶನ ನಡೆದಿತ್ತು. ಕೆಲವು ಶಾಲಾ ಕಾಲೇಜುಗಳಲ್ಲಿ ಪುಸ್ತಕ ಮುಖಪುಟ ವಿನ್ಯಾಸಗಳ ಪೋಸ್ಟರ್ ಪ್ರದರ್ಶನ ಹಾಗೂ ಉಪನ್ಯಾಸ ನೀಡುವ ಮೂಲಕ ಈ ಕಲೆಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಹುಟ್ಟಿಸಿದ್ದಾರೆ.
ಕಳೆದ 13 ವರ್ಷಗಳಿಂದ ಡಿಜಿಟಲ್ ಚಿತ್ರಕಲೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ನವಕರ್ನಾಟಕ ಪ್ರಕಾಶನ, ಟೋಟಲ್ ಕನ್ನಡ, ಪ್ರಗತಿ ಗ್ರಾಫಿಕ್ಸ್ ನಿವೇದಿತ ಪ್ರಕಾಶನ, ಮೈಲಾಂಗ್, ಗೋಮಿನಿ ಪ್ರಕಾಶನ ಇನ್ನೂ ಹಲವು ಕನ್ನಡ ಪ್ರಮುಖ ಪ್ರಕಾಶನದ ಪುಸ್ತಕಗಳಿಗೆ ಮುಖಪುಟ ವಿನ್ಯಾಸ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಪ್ರಕಟಿಸಿದ ಸ್ಮರಣ ಸಂಚಿಕೆಯನ್ನು ವಿನ್ಯಾಸ ಮಾಡಿರುವರು. ಮುಖಪುಟ ವಿನ್ಯಾಸ ಕಲೆಯನ್ನು ಗುರುತಿಸಿ 2017 ರ ಶಿಡ್ಲಘಟ್ಟ ತಾಲ್ಲೂಕು ಕಸಾಪ ಆರನೇಯ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಗೌರವಿಸಿ ಸನ್ಮಾನಿಸಿದ್ದಾರೆ. 2018 ರಲ್ಲಿ ಉತ್ತಮ ಮುಖಪುಟ ವಿನ್ಯಾಸಕ್ಕಾಗಿ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪುರಸ್ಕರಿಸಲಾಗಿದೆ.
2020 ಜನವರಿಯಲ್ಲಿ ಉತ್ತರಪ್ರದೇಶದ ಕಲ್ಚರಲ್ ಆರ್ಟ್ ಫೌಂಡೇಷನ್ ಆಯೋಜಿಸಿದ್ದ ಅಖಿಲ ಭಾರತ ಕಲಾ ಸ್ಪರ್ಧೆಯಲ್ಲಿ “ಓಲ್ಡ್ ಮಾಂಕ್” ಎಂಬ ಕಲಾಕೃತಿಗೆ ಬೆಳ್ಳಿ ಪದಕ ಪಡೆದಿರುವರು. 2020 ಏಪ್ರಿಲ್ ತಿಂಗಳಿನಲ್ಲಿ ರಾಜಸ್ಥಾನದ ಜೈಪುರ ಮೂಲದ ಆಬ್ಸಲ್ಯೂಟ್ ಆರ್ಟ್ ಗ್ಯಾಲರಿಯವರು ಆಯೋಜಿಸಿದ್ದ ಅಖಿಲ ಭಾರತ ಕಲಾ ಸ್ಪರ್ಧೆಯಲ್ಲಿ “ಬ್ಲಾಸಮ್” ಎಂಬ ಕಲಾಕೃತಿಗೆ ಬಂಗಾರ ಪದಕ ಪಡೆದಿದ್ದಾರೆ. 2020ರಲ್ಲಿ 100 ದಿನಗಳು 100 ವಿಜ್ಞಾನಿಗಳ ಚಿತ್ರವನ್ನು ರಚಿಸಿ, ಆ ವಿಜ್ಞಾನಿಗಳ ಟಿಪ್ಪಣಿಯೊಂದಿಗೆ ಪ್ರಕಟಿಸಲು techkannada.in ಸಂಸ್ಥೆ ಅವಕಾಶ ಮಾಡಿಕೊಟ್ಟಿದೆ. ಹಲವು ಕಥೆ ಮತ್ತು ಕವನ ಪುಸ್ತಕಗಳಿಗಾಗಿ ರೇಖಾಚಿತ್ರಣಗಳನ್ನು ರಚಿಸಿರುವ ಇವರು, ಕನ್ನಡ ಸಾಹಿತ್ಯ, ಚಲನಚಿತ್ರ, ವಿಜ್ಞಾನ-ತಂತ್ರಜ್ಞಾನ, ಕ್ರೀಡೆ ವಿಭಾಗದಲ್ಲಿ ಸಾಧನೆ ಮಾಡಿರುವವರ ಡಿಜಿಟಲ್ ರೇಖಾಚಿತ್ರವನ್ನು ರಚಿಸಿರುವರು. ಪ್ರಸ್ತುತ ವಿದ್ಯಾರ್ಥಿಗಳಿಗೆ ಪರಿಚಯಿಸಲು 40ಕ್ಕೂ ಹೆಚ್ಚು ಇಸ್ರೋ ವಿಜ್ಞಾನಿಗಳ ರೇಖಾಚಿತ್ರವನ್ನು ರಚಿಸಿದ್ದಾರೆ. ಇದನ್ನು ಪುಸ್ತಕ ರೂಪದಲ್ಲಿ ತರುವು ಪ್ರಯತ್ನಗಳು ನಡೆಯುತ್ತಿದೆ.
“ಮೊದಲಿಂದಲೂ ನನಗೆ ಚಿತ್ರಕಲೆಯಲ್ಲಿ ಒಲವಿತ್ತು. ಕಂಪ್ಯೂಟರ್ ಮತ್ತು ಅಂತರ್ಜಾಲ ಬಂದನಂತರ ಕಲಾವಿದರಿಗೆ ಹೊಸ ಸಾಧ್ಯತೆಗಳು ಸಿಕ್ಕಿವೆ. ಮುಖಪುಟ ವಿನ್ಯಾಸ ಮಾಡುವುದು ಕೂಡ ಅತ್ಯಂತ ಸೃಜನಶೀಲತೆಯಿಂದ ಕೂಡಿರುತ್ತದೆ ಎಂಬುದನ್ನು ಮುಖಪುಟ ಕಲಾವಿದ ಅಪಾರ ಅವರಿಂದ ಕಂಡುಕೊಂಡೆ. ಅವರ ಪ್ರೇರಣೆಯಿಂದ ನಾನೂ ಪ್ರಯತ್ನಿಸಿದೆ. ಮುಖಪುಟ ರಚಿಸುವಾಗ ಹಲವಾರು ಸವಾಲುಗಳಿರುತ್ತವೆ. ಆಕರ್ಷಣೆ ಮತ್ತು ಅಭಿವ್ಯಕ್ತಿ ನಡುವೆ ಜಗ್ಗಾಟವಂತೂ ಇದ್ದೇ ಇದೆ. ಓದುಗ ಖರೀದಿಸಲು ಆಕರ್ಷಕವಾಗಿರುವಂತೆಯೇ ಪುಸ್ತಕದ ಆಶಯವನ್ನೂ ಅದು ಬಿಂಬಿಸಬೇಕು. ಆರ್ಥಿಕವಾಗಿ ಈ ಕಲೆಯ ಮೇಲೆ ಅವಲಂಭಿಸಿಲ್ಲ. ಇದು ಕೇವಲ ಹವ್ಯಾಸವಾಗಷ್ಟೇ ಇರುವುದರಿಂದ ನನಗೆ ಸಾಕಷ್ಟು ನೆಮ್ಮದಿ ಹಾಗೂ ಸಂತಸ ಸಿಗುತ್ತಿದೆ” ಎನ್ನುತ್ತಾರೆ ಅಜಿತ್ ಕೌಂಡಿನ್ಯ.