Sidlaghatta : ಕಬ್ಜ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಶಿಡ್ಲಘಟ್ಟದಲ್ಲಿ ಅದ್ದೂರಿಯಾಗಿ ಫೆಬ್ರುವರಿ 26 ರ ಭಾನುವಾರ ಸಂಜೆ 6 ಗಂಟೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಕನ್ನಡ ಚಲನಚಿತ್ರ ರಂಗದ ಖ್ಯಾತ ನಟರಾದ ಶಿವರಾಜ್ ಕುಮಾರ್, ಉಪೇಂದ್ರ, ಶ್ರೇಯಾಶರಣ್, ದುನಿಯಾ ವಿಜಯ್ ಸೇರಿದಂತೆ ವಿವಿಧ ಖ್ಯಾತ ನಟ ನಟಿಯರು ಆಗಮಿಸುವರು ಎಂದು ಚಲನಚಿತ್ರ ನಿರ್ದೇಶಕ ಆರ್.ಚಂದ್ರು ತಿಳಿಸಿದರು.
ತಾಲ್ಲೂಕಿನ ಕೇಶವಪುರ ಬಳಿಯ ತಮ್ಮ ತೋಟದ ಮನೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕನ್ನಡ ಚಲನಚಿತ್ರದ ಪ್ರಮುಖ ನಟರು ಶಿಡ್ಲಘಟ್ಟಕ್ಕೆ ಆಗಮಿಸುವರು. ನಾನು ಹುಟ್ಟಿ ಬೆಳೆದ ಊರಿನ, ನನ್ನ ಜನರ ನಡುವಿನಲ್ಲಿ, ಕೌಟುಂಬಿಕ ಪರಿಸರದಲ್ಲಿ ಎಲ್ಲರೂ ಕುಳಿತು ಮೂರು ಗಂಟೆಗಳ ಕಾಲ ರಸಸಂಗೀತವನ್ನು ಆಸ್ವಾದಿಸುವ “ಕಬ್ಜ ಸಿನಿಮಾ ಹಬ್ಬ” ವನ್ನು ಇದೇ ಫೆಬ್ರುವರಿ 26 ರಂದು ಆಯೋಜಿಸಿರುವುದಾಗಿ ಹೇಳಿದರು.
ನಾನು ಹುಟ್ಟಿ ಬೆಳೆದ ಶಿಡ್ಲಘಟ್ಟದಲ್ಲಿ ಈ ಹಿಂದೆ 2016 ರ ಮೇ 1 ರಂದು ಲಕ್ಷ್ಮಣ ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಸಲಾಗಿತ್ತು. ಕನ್ನಡ ಚಲನಚಿತ್ರವೊಂದರ ಅದ್ದೂರಿ ಕಾರ್ಯಕ್ರಮವನ್ನು ಶಿಡ್ಲಘಟ್ಟದಲ್ಲಿ ನಡೆಸುವ ಮೂಲಕ ತಾಲ್ಲೂಕಿನ ಜನರಿಗೆ ಕನ್ನಡ ಚಿತ್ರರಂಗದ ಪ್ರಮುಖರನ್ನು ಕರೆತಂದು ತೋರಿಸುವುದು ಒಂದೆಡೆಯಾದರೆ, ಮತ್ತೊಂದೆಡೆ ಇಡೀ ಕನ್ನಡ ಚಲನಚಿತ್ರ ರಂಗದವರಿಗೆ ಶಿಡ್ಲಘಟ್ಟವನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿದ್ದೇನೆ ಎಂದರು.
ಈ ರೀತಿಯ ಕಾರ್ಯಕ್ರಮಗಳು ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ ನಡೆಯುವುದು ರೂಢಿ. ಆದರೆ ಗಡಿ ಭಾಗದ ಜನರಲ್ಲೂ ಕನ್ನಡ ಪ್ರೀತಿಯಿದೆ ಎಂಬುದನ್ನು ಚಿತ್ರರಂಗದವರಿಗೆ ತೋರಿಸಿ, ನಮ್ಮೂರಿನ ಯುವಕರು ಹಾಗೂ ಮಕ್ಕಳಿಗೆ ಸಾಧಕರನ್ನು ಪರಿಚಯಿಸಿ ಅವರಿಗೂ ಚಿತ್ರರಂಗದಂತಹ ಕ್ರಿಯಾಶೀಲ ಕ್ಷೇತ್ರದೆಡೆಗೆ ಆಸಕ್ತಿ ಉಂಟು ಮಾಡುವ ಉದ್ದೇಶವಿದೆ ಎಂದರು.
ಕುಟುಂಬ ಸಮೇತರಾಗಿ ತಾಲ್ಲೂಕು ಹಾಗೂ ಜಿಲ್ಲೆಯ ಜನರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಉತ್ತಮ ಕಾರ್ಯಕ್ರಮವನ್ನು ವೀಕ್ಷಿಸಲು ಸಕಲ ಏರ್ಪಾಡುಗಳನ್ನು ಮಾಡಲಾಗಿದೆ. ಮನರಂಜನೆಯೊಂದಿಗೆ ನಮ್ಮ ತಾಲ್ಲೂಕಿನ ಜನರನ್ನು ಕನ್ನಡ ಸಿನಿಮಾದತ್ತ ಆಕರ್ಷಿಸುವ, ಯುವಕರಿಗೆ ಹೊಸ ಪ್ರೇರಣೆ ನೀಡುವ ಕಾರ್ಯಕ್ರಮ ಇದಾಗಲಿದೆ ಎಂದರು.
ಚಲನಚಿತ್ರ ನಿರ್ಮಾಪಕ ಮೇಲೂರು ಆರ್.ವಿಜಯಕುಮಾರ್, ಆರ್.ರಾಜಶೇಖರ್ ಹಾಜರಿದ್ದರು.