Melur, Sidlaghatta : ತಾಲ್ಲೂಕಿನಲ್ಲಿ ಕುರುಬ ಸಮುದಾಯಕ್ಕೆ ಸಮುದಾಯ ಭವನ ಮತ್ತು ಶಿಕ್ಷಣ ಸಂಸ್ಥೆ, ವಸತಿನಿಲಯ ಆರಂಭಿಸಲು ಸೂಕ್ತ ಜಾಗವನ್ನು ಮಂಜೂರು ಮಾಡಿಸುವಂತೆ ಕುರುಬ ಸಮುದಾಯದ ಮುಖಂಡರು ಶಾಸಕ ಬಿ.ಎನ್.ರವಿಕುಮಾರ್ ಅವರಲ್ಲಿ ಮನವಿ ಮಾಡಿದರು.
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿನ ಅವರ ನಿವಾಸದಲ್ಲಿ ಶಾಸಕ ರವಿಕುಮಾರ್ ಅವರನ್ನು ಭೇಟಿ ಮಾಡಿದ ಕುರುಬರ ಸಂಘದ ಪದಾಧಿಕಾರಿಗಳು, ನವೆಂಬರ್ 30ರಂದು ಕನಕ ಜಯಂತಿ ಆಚರಿಸಲಿದ್ದು ಜಯಂತ್ಯೋತ್ಸವದಲ್ಲಿ ಭಾಗವಹಿಸಲು ಮನವಿ ಮಾಡಿ ಆಹ್ವಾನ ಪತ್ರಿಕೆಯನ್ನು ನೀಡಿದರು.
ಜಯಂತಿಯಲ್ಲಿ ಕುರುಬ ಸಮುದಾಯವಲ್ಲದೆ ಇತರೆ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಿರಿಯ ಸಾಧಕರಿಗೆ ಸನ್ಮಾನ, ಕನಕದಾಸರಿಗೆ ಪೂಜೆ, ಕಲಾ ತಂಡಗಳ ಮೆರವಣಿಗೆ ಪಲ್ಲಕಿ ಉತ್ಸವ ನಡೆಯಲಿದೆ ಎಂದು ಜಯಂತ್ಯುತ್ಸವದ ರೂಪುರೇಷೆಗಳನ್ನು ವಿವರಿಸಲಾಯಿತು.
ಎರಡು ಎಕರೆ ಜಮೀನು ಮಂಜೂರು ಮಾಡಿಸಿದರೆ ಅಲ್ಲಿ ಸಮುದಾಯ ಭವನ, ವಿದ್ಯಾಸಂಸ್ಥೆ, ವಸತಿ ನಿಲಯವನ್ನು ನಿರ್ಮಿಸಿ ಕುರುಬ ಸಮುದಾಯದ ಶೈಕ್ಷಣಿಕ, ಆರ್ಥಿಕ, ರಾಜಕೀಯ ಅಭಿವೃದ್ದಿಗೆ ನೆರವಾಗಲಿದೆ ಎಂದು ಕೋರಿದರು.
ಮನವಿಗೆ ಸ್ಪಂದಿಸಿದ ಶಾಸಕ ರವಿಕುಮಾರ್ ಅವರು, ಸೂಕ್ತವಾದ ಜಾಗದ ಹುಡುಕಾಟ ನಡೆಸಿ ಮಂಜೂರು ಮಾಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.
ಕುರುಬರ ಸಂಘದ ಅಧ್ಯಕ್ಷ ಕೆ.ಮಂಜುನಾಥ್, ಎ.ರಾಮಚಂದ್ರಪ್ಪ, ಹಿತ್ತಲಹಳ್ಳಿ ವೆಂಕಟೇಶ್, ಸುಗಟೂರು ಅಶ್ವತ್ಥಪ್ಪ, ಹೊಸಪೇಟೆ ಬಸಪ್ಪ, ವೀರಾಪುರ ರಾಮಣ್ಣ, ಮುನಿನಂಜಪ್ಪ, ಸುಬ್ಬು ಹಾಜರಿದ್ದರು.