Kachahalli, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕಾಚಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ “ಅಕ್ಷರ ಸಂಕ್ರಾಂತಿ” ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಕ್ಷಕರು ಮಕ್ಕಳಿಂದ ಗೋವು ಪೂಜೆ ಮಾಡಿಸಿದರು. ಗ್ರಾಮದ ಮಧ್ಯ ಭಾಗದಲ್ಲಿರುವ ಗೋವುಕಲ್ಲು ಬಗ್ಗೆ ಶಿಕ್ಷಕ ವಿ.ಚಂದ್ರಶೇಖರ್ ಮಕ್ಕಳಿಗೆ ವಿವರಿಸಿದರು. ಸುಮಾರು 500 ವರ್ಷಗಳ ಹಿಂದೆ ಕಾಚಹಳ್ಳಿ ಗ್ರಾಮದಲ್ಲಿ ದನಕರುಗಳ ಒಳಿತಿಗಾಗಿ ಗೋವು ಕಲ್ಲನ್ನು ನೆಡಲಾಗಿದೆ. ಗೋಕಲ್ಲು ಬಹುತೇಕ ಎಲ್ಲಾ ಗ್ರಾಮಗಳಲ್ಲಿ ಇರುತ್ತದೆ ಎಂದು ಗೋಕಲ್ಲುವಿನ ಮಹತ್ವವನ್ನು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಸಂಕ್ರಾಂತಿಯ ಹಬ್ಬದಂದು ದನಕರುಗಳನ್ನು ತೊಳೆದು ವಿವಿಧ ರೀತಿಯಲ್ಲಿ ಶೃಂಗಾರ ಮಾಡಿ, ಸಂಜೆ ಊರ ಹೊರಗಿನ ಕಾಟಮರಾಯರ ಗುಡಿಯ ಬಳಿ ದನಕರುಗಳಿಗೆ ಒಳಿತಾಗಲೆಂದು ಪೂಜೆ ಸಲ್ಲಿಸಿ ಕಿಚ್ಚು ಹಾಯಿಸುತ್ತಾರೆ. ಇದು ನಮ್ಮ ನೆಲದ ಸಂಸ್ಕೃತಿ ನಮ್ಮ ಜನಪದ ಸಂಸ್ಕೃತಿಯನ್ನು ನಾವು ಅರಿತುಕೊಳ್ಳಬೇಕು ಹಾಗೂ ನಾವೂ ಪಾಲಿಸಿ ಮುಂದಿನ ಪೀಳಿಗೆಗೆ ತಿಳಿಸಬೇಕೆಂದು ಹೇಳಿದರು.
ಸಂಕ್ರಾಂತಿಯ ದಿನ ಕಡಲೇಕಾಯಿ ಅವರೇಕಾಯಿ ಗೆಣಸು ಬೇಯಿಸಿ, ಎಳ್ಳು ಬೆಲ್ಲ ಕಡಲೆ ಪಪ್ಪು ಜೊತೆ ಅಕ್ಕಪಕ್ಕದವರು ಪರಸ್ಪರ ಹಂಚಿ ಒಳಿತಾಗಲೆಂದು ಕೋರುತ್ತಾರೆ ಎಂದು ಮಕ್ಕಳಿಗೆ ತಿಳಿಸಲಾಯಿತು. ಶಾಲೆಯಲ್ಲಿ ಮಕ್ಕಳಿಗೆ ವಿಶೇಷವಾಗಿ ಅವರೇಕಾಯಿ ಸುಲಿಯುವ, ಅವರೇಕಾಳು ಹಿದುಕುವ ಹಾಗೂ ಕಡಲೇಕಾಯಿ ಸುಲಿಯುವ ಸ್ಪರ್ಧೆಗಳನ್ನು ಎರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸಿ ಆರ್ ಪಿ ಶೀಲಾ, ಮುಖ್ಯ ಶಿಕ್ಷಕಿ ಆರ್.ರಾಜೇಶ್ವರಿ, ಎಸ್ ಡಿ ಎಂ ಸಿ ಸದಸ್ಯರಾದ ಶ್ವೇತ, ರಾಮಕೃಷ್ಣಪ್ಪ, ಲಕ್ಷ್ಮೀ, ಗಂಗಾಧರ, ಶಾರದಮ್ಮ, ವೀಣಾ, ಮುನಿರತ್ನಮ್ಮ, ಗ್ರಾಮಸ್ಥರು ಹಾಜರಿದ್ದರು.