ಗ್ರಾಮೀಣ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾದುದು ಎಂದು ಚಿಂತಾಮಣಿ ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್.ರಘು ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಭಾನುವಾರ ಸೇವಾ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಜ್ಞಾನ ವಿಕಾಸ ಯೋಜನೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ಹಳ್ಳಿಗಳ ದೇಶವಾಗಿದ್ದು, ದೇಶದ ಆರ್ಥಿಕ ಪ್ರಗತಿಯಲ್ಲಿ ಹಳ್ಳಿಗಳ ಪಾತ್ರ ಮುಖ್ಯವಾಗಿದೆ. ಗ್ರಾಮಗಳ ಆರ್ಥಿಕ ಪ್ರಗತಿಯಲ್ಲಿ ಮಹಿಳೆಯರು ಮಹತ್ವದ ಪಾತ್ರವನ್ನು ವಹಿಸುತ್ತಿದ್ದಾರೆ. ಗ್ರಾಮೀಣ ಭಾಗದ ಹಲವು ಕೈಗಾರಿಕೆಗಳಲ್ಲಿ ಮತ್ತು ಹೈನುಗಾರಿಕೆ ಹಾಗೂ ಕೃಷಿ ಆಧಾರಿತ ಕಸುಬುಗಳಲ್ಲಿ ಮಹಿಳೆ ಪ್ರಧಾನ ವ್ಯಕ್ತಿ. ಮಹಿಳೆ ಅಬಲೆಯಲ್ಲ ಸಬಲೆಯಾಗಿದ್ದಾಳೆ. ಮಹಿಳಯರು ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಛಾಪು ಮೂಡಿಸುತ್ತಿದ್ದಾರೆ.
ಮಹಿಳೆಯರ ಆರೋಗ್ಯ ಮತ್ತು ಶಿಕ್ಷಣ ಅತ್ಯಂತ ಮುಖ್ಯವಾಗಿದೆ. ನಾಲ್ಕು ಗೋಡೆಗಳ ಮಧ್ಯ ಬದುಕುತ್ತಿದ್ದ ಮಹಿಳೆ ಇಂದು ನಿಧಾನವಾಗಿ ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾಳೆ. ಇಂತಹ ಮಹಿಳೆಯರನ್ನು ಪ್ರೋತ್ಸಾಹಿಸಿ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮಗಳಿಂದ ಆರೋಗ್ಯ, ಶಿಕ್ಷಣ, ವ್ಯಕ್ತಿತ್ವ ವಿಕಸನ, ಸಾಮಾಜಿಕ ಸಂಬಂಧಗಳು, ಆರ್ಥಿಕ ಚಟುವಟಿಕೆಗಳ ನಿರ್ವಹಣೆ, ಕೋವಿಡ್ ನಿರ್ವಹಣೆ ಇನ್ನಿತರ ವಿಚಾರಗಳನ್ನು ತಿಳಿಸಲಾಗುತ್ತಿದೆ. ಈ ಮುಖೇನ ಗ್ರಾಮೀಣ ಮಹಿಳೆಯರ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕಾರಣವಾಗಿದೆ ಎಂದರು.
ಸರಸ್ವತಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಶ್ರೀಕಾಂತ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕರ್ನಾಟಕದಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗವನ್ನು ಕಲ್ಪಿಸಿದೆ. ಆರ್ಥಿಕ ಮತ್ತು ಸಾಮಾಜಿಕ ಸೇವೆಗಳಲ್ಲಿ ತೊಡಗಿದೆ. ರಾಜ್ಯದ ಆರ್ಥಿಕ ಪ್ರಗತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿದೆ ಎಂದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ನಾಗರಾಜರಾವ್ ಮಾತನಾಡಿ, ಹೆಣ್ಣೊಂದು ಕಲಿತರ ಶಾಲೆಯೊಂದು ತೆರೆದಂತೆ. ಸಮಾಜದಲ್ಲಿನ ಶಾಂತಿಗೆ, ಸಂಸ್ಕಾರ, ತ್ಯಾಗ ಮತ್ತು ಸಹನೆಯ ಪ್ರತಿರೂಪವೆ ಮಹಿಳೆ. ಆರೋಗ್ಯವಂತ ಮಹಿಳೆಯಿಂದ ಆರೋಗ್ಯವಂತ ಸಮಾಜ ನಿರ‍್ಮಾಣ ಸಾಧ್ಯ. ಪರಂಪರಾಗತವಾಗಿ ಬಂದಂತಹ ಮೌಲ್ಯಗಳನ್ನು ಮತ್ತು ಸಂಸ್ಕಾರಗಳನ್ನು ಇಂದಿನ ಮಕ್ಕಳಿಗೆ ತಿಳಿಸಬೇಕಾಗಿದೆಯೆಂದರು.
ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ವಸಂತ್, ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಜ್ಞಾನ ವಿಕಾಸದ ತಾಲ್ಲೂಕು ಸಮನ್ವಯಧಿಕಾರಿ ಲಕ್ಷ್ಮೀ, ಆಡಳಿತ ಪ್ರಬಂಧಕಿ ಚೈತ್ರಾ ಮತ್ತು ಜ್ಞಾನ ವಿಕಾಸ ಸಂಯೋಜಕಿಯರು ಹಾಜರಿದ್ದರು.