ತಾಲ್ಲೂಕಿನ ಎಸ್.ವೆಂಕಟಾಪುರ ಬಳಿಯಿರುವ ಶ್ರೀ ಮುನಿಯಪ್ಪನಕಟ್ಟೆ ದೇವಾಲಯದ ಆವರಣದಲ್ಲಿ ಶುಕ್ರವಾರ ತಾಲ್ಲೂಕು ಜೆಡಿಎಸ್ ವತಿಯಿಂದ ಗ್ರಾಮ ಪಂಚಾಯಿತಿ ಚುನಾವಣೆಯ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಬಶೆಟ್ಟಹಳ್ಳಿ ಹಾಗೂ ಸಾದಲಿ ಹೋಬಳಿಯ ಜೆಡಿಎಸ್ ಮುಖಂಡರ ಹಾಗೂ ಕಾರ್ಯಕರ್ತರ ಚುನಾವಣಾ ಪೂರ್ವಸಿದ್ದತೆ ಸಭೆಯಲ್ಲಿ ಭಾಗವಹಿಸಿ ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ಮಾತನಾಡಿದರು.
ತಾಲ್ಲೂಕಿನ ಸಾದಲಿ ಹಾಗೂ ಬಶೆಟ್ಟಹಳ್ಳಿ ಹೋಬಳಿಯಲ್ಲಿರುವ ನೈಸರ್ಗಿಕ ಸಂಪತ್ತು ಉಳಿಯಬೇಕಾದರೆ ಈ ಭಾಗದ ಎಲ್ಲಾ 9 ಗ್ರಾಮ ಪಂಚಾಯಿತಿಗಳಲ್ಲಿಯೂ ಜೆಡಿಎಸ್ ಅಧಿಕಾರ ಹಿಡಿಯಬೇಕು ಎಂದು ಅವರು ಹೇಳಿದರು.
ಬಶೆಟ್ಟಹಳ್ಳಿ ಹಾಗೂ ಸಾದಲಿ ಹೋಬಳಿಯಲ್ಲಿ ಬಹಳಷ್ಟು ನೈಸರ್ಗಿಕ ಸಂಪತ್ತು ಅಡಗಿದ್ದು ಇದನ್ನು ಉಳಿಸುವ ಕೆಲಸ ಆಗಬೇಕಿದೆ. ಯಾವುದೇ ಜನಪರ ಕಾರ್ಯಗಳನ್ನು ಮಾಡದೇ ಕೇವಲ ದೇಶದ ಜನರ ಮನಸ್ಸಿನಲ್ಲಿ ಧರ್ಮದ ಬಗ್ಗೆ ಪ್ರಚೋದನೆ ಮಾಡಿ ಅಧಿಕಾರ ಹಿಡಿದಿರುವ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಅರಣ್ಯ ಭೂಮಿಯನ್ನು ಲಪಟಾಯಿಸಲು ಮುಂದಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಅಧಿಕಾರಾವಧಿಯಲ್ಲಿ ಮಾಡಿರುವ ಜನಪರ ಕಾರ್ಯಕ್ರಮಗಳನ್ನು ಕ್ಷೇತ್ರದ ಪ್ರತಿಯೊಬ್ಬ ಮತದಾರನಿಗೂ ಮುಟ್ಟಿಸುವ ಮೂಲಕ ಕಾರ್ಯಕರ್ತರು ಹಾಗೂ ಮುಖಂಡರು ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆ ಎದುರಿಸಲು ಸಿದ್ದರಾಗಬೇಕು ಎಂದರು.
ಜಿಲ್ಲಾ ಪಂಚಾಯಿತಿಯ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿ, ಇದೇ ತಿಂಗಳು 22 ರಂದು ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದ್ದು ಗ್ರಾಮದ ಎಲ್ಲಾ ಮುಖಂಡರು ಸೇರಿದಂತೆ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಆಯಾ ಪಂಚಾಯಿತಿ ವ್ಯಾಪ್ತಿಯ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಜೊತೆಗೆ ಯಾರೇ ಅಭ್ಯರ್ಥಿಯಾಗಲಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಪಂಚಾಯಿತಿಗಳು ಜೆಡಿಎಸ್ ವಶವಾಗುತ್ತವೆ. ಈ ನಿಟ್ಟಿನಲ್ಲಿ ಚುನಾವಣೆ ಸಮಯದಲ್ಲಿ ಯಾವುದೇ ಮನಸ್ಥಾಪವಿಟ್ಟುಕೊಳ್ಳದೇ ಎಲ್ಲರೂ ಪ್ರಾಮಾಣಿಕವಾಗಿ ದುಡಿಯಲು ಮುಂದಾಗಬೇಕು ಎಂದರು.
ಕಳೆದೆರಡು ವರ್ಷಗಳಿಂದ ಪಕ್ಷದಿಂದ ದೂರವುಳಿದುಕೊಂಡಿದ್ದ ಜೆಡಿಎಸ್ ಮಾಜಿ ಅಧ್ಯಕ್ಷ ಡಾ.ಧನಂಜಯರೆಡ್ಡಿ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಗೊಂಡು ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ನಡೆದ ಕೆಟ್ಟ ಘಟನೆಗಳಿಂದ ಜೆಡಿಎಸ್ ಅಭ್ಯರ್ಥಿ ಸೋಲಬೇಕಾಯಿತು. ಜೆಡಿಎಸ್ ಅಭ್ಯರ್ಥಿ ಸೋಲಲು ನಾನು ಸಹ ಪರೋಕ್ಷವಾಗಿ ಕಾರಣವಿರಬಹುದು ಅದಕ್ಕಾಗಿ ಜೆಡಿಎಸ್ ಕಾರ್ಯಕರ್ತರಲ್ಲಿ ಕ್ಷಮೆ ಯಾಚಿಸುತ್ತೇನೆ. ಮುಂದಿನ ದಿನಗಳಲ್ಲಿ ಈ ಹಿಂದೆ ನಡೆದ ಕಹಿ ಘಟನೆಗಳನ್ನು ಎಲ್ಲರೂ ಮರೆತು ಒಗ್ಗಟ್ಟಾಗಿ ಜೆಡಿಎಸ್ ಪಕ್ಷಕ್ಕಾಗಿ ದುಡಿಯೋಣ. ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ವಿಧಾನಸಭೆ ಚುನಾವಣೆಗೆ ಇದೀಗ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆ ಅಡಿಪಾಯವಾಗಿರುವುದರಿಂದ ಕ್ಷೇತ್ರದ ಬಹುತೇಕ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿಯೂ ಜೆಡಿಎಸ್ ಅಧಿಕಾರ ಹಿಡಿಯಬೇಕು. ಬಿ.ಎನ್.ರವಿಕುಮಾರ್‌ರನ್ನು ಮುಂದಿನ ಚುನಾವಣೆಯಲ್ಲಿ ಶಾಸಕರನ್ನಾಗಿ ಆಯ್ಕೆ ಮಾಡುವವರೆಗೂ ಕ್ಷೇತ್ರದಾದ್ಯಂತ ಇರುವ ಹಳ್ಳಿ ಹಳ್ಳಿಗೂ ಭೇಟಿ ನೀಡಿ ಪಕ್ಷ ಸಂಘಟಿಸುವ ಮೂಲಕ ಅವರ ಕೈ ಬಲಪಡಿಸುವ ಕೆಲಸ ಮಾಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಬಶೆಟ್ಟಹಳ್ಳಿ ಹಾಗೂ ಸಾದಲಿ ಹೋಬಳಿಯ ನೂರಾರು ಮುಖಂಡರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಿ.ಬಿ.ವೆಂಕಟೆಶಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಕೆ.ರಾಜಶೇಖರ್, ಮಾಜಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಹುಜಗೂರು ರಾಮಯ್ಯ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಶಿವಾರೆಡ್ಡಿ, ಮುಖಂಡರಾದ ತಾದೂರು ರಘು, ಪೂಲಕುಂಟ್ಲಹಳ್ಳಿ ರಘುನಾಥರೆಡ್ಡಿ, ಜೆ.ವಿ.ಸದಾಶಿವ, ಮುಗಿಲಡಿಪಿ ನಂಜಪ್ಪ, ಕೆ.ಎಸ್.ಮಂಜುನಾಥ್, ಎನ್.ವಿಜಯೇಂದ್ರ, ಡಿ.ಸಿ ರಾಮಚಂದ್ರ, ಚಿಕ್ಕನರಸಿಂಹಯ್ಯ, ಸೇರಿದಂತೆ ಎರಡೂ ಹೋಬಳಿಗಳ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.