Sidlaghatta : ಭಾರತೀಯ ಜನತಾ ಪಾರ್ಟಿಯ ಆಡಳಿತ ಇರುವ ಯಾವುದೇ ರಾಜ್ಯದಲ್ಲೂ ಒಬ್ಬ ಮುಸ್ಲಿಂ ಮಂತ್ರಿ ಇಲ್ಲ. ನಾವು ಭಾರತಾಂಬೆಯ ಮಕ್ಕಳು, ನಾವೆಲ್ಲರೂ ಒಂದು. ಏಕೆ ಈ ತಾರತಮ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಶ್ನಿಸಿದರು.
ನಗರದ ದಿಬ್ಬೂರಹಳ್ಳಿಯ ರಸ್ತೆಯಲ್ಲಿನ ಮೈದಾನದಲ್ಲಿ ಶನಿವಾರ ಜೆಡಿಎಸ್ ಅಭ್ಯರ್ಥಿ ಬಿ.ಎನ್ ರವಿಕುಮಾರ್ ಅವರ ಪರವಾಗಿ ಮತಯಾಚಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಬಿಜೆಪಿ ಶಕ್ತಿ ಕುಂದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಗೊತ್ತಾಗಿದೆ. ಹೀಗಾಗಿ ಕರ್ನಾಟಕದಲ್ಲಿ ರೋಡ್ ಶೋ ಮಾಡುತ್ತಿದ್ದಾರೆ. ರೋಡ್ ಶೋ ಮಾಡಿ ಜನರನ್ನು ಮರುಳು ಮಾಡಲು ಸಾಧ್ಯವಿಲ್ಲ ಎಂದರು.
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿಲ್ಲ ಆದರೂ ಸಹ ಪ್ರಧಾನಮಂತ್ರಿಗಳು ರೋಡ್ ಶೋ ಮಾಡುತ್ತಿದ್ದಾರೆ. ಆ ಪಕ್ಷಕ್ಕೆ ಯಾವ ಸ್ಥಿತಿ ಬಂದಿದೆ ಎಂಬುದು ಇದರಿಂದ ಅರ್ಥವಾಗುತ್ತದೆ. ಕರ್ನಾಟಕದ ಜನರು ಬುದ್ಧಿವಂತರು. ಅವರನ್ನು ಮರಳು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಜಾತ್ಯತೀತ ಸರ್ಕಾರ ಅಧಿಕಾರಕ್ಕೆ ಬರಲು ಕೆಲ ಕಾಂಗ್ರೆಸ್ಸಿಗರಿಗೆ ಇಷ್ಟವಿಲ್ಲ ಹೀಗಾಗಿ ಅವರು ಸಮಿಶ್ರ ಸರ್ಕಾರವನ್ನು ಪತನಗೊಳಿಸಿದರು. ಸರ್ಕಾರವನ್ನು ಬೀಳಿಸಲು 18 ಜನರನ್ನು ಮುಂಬೈ ಕಳಿಸಿದವರು ಯಾರು ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.
ಈ ರಾಜ್ಯದ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಮಂತ್ರಿಯಾಗಿ ಮಹಿಳೆಯರಿಗೆ, ಮುಸ್ಲಿಂ ಮತ್ತು ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿದ್ದೇನೆ. ರಾಜ್ಯದ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕೆಲಸ ಮಾಡಿದ್ದೇನೆ. ಆದರೆ, ಹಿಂದಿನ ಸರ್ಕಾರಗಳಿಂದ ಕರ್ನಾಟಕ ಬಯಲುಸೀಮೆ ಪ್ರದೇಶಗಳಿಗೆ ಎತ್ತಿನಹೊಳೆ ಯೋಜನೆ ಬರ್ತಾಯಿದೆ, ಬರ್ತಾಯಿದೆ, ಬರ್ತಾನೇಯಿದೆ ಎಂದು ವ್ಯಂಗ್ಯವಾಡಿದರು.
ನನಗೆ 90 ವರ್ಷ ವಯಸ್ಸಾದರೂ ಸಹ ಪ್ರತಿನಿತ್ಯ ಹತ್ತರಿಂದ ಹನ್ನೆರಡು ಸಭೆಯಲ್ಲಿ ಭಾಗವಹಿಸಿ ರಾತ್ರಿ 3ಗಂಟೆಗೆ ಮಲಗುತ್ತಿದ್ದೇನೆ. ಕರ್ನಾಟಕ ರಾಜ್ಯದ ಹಿಂದೂ-ಮುಸ್ಲಿಂ ಎಂಬ ಭೇದಭಾವವಿಲ್ಲದೆ ಭಾರತಾಂಬೆಯ ಮಕ್ಕಳಾಗಿ ಎಲ್ಲರೂ ಅನ್ಯೋನ್ಯದಿಂದ ಬದುಕಬೇಕು. ಕರ್ನಾಟಕದ ಅಭಿವೃದ್ಧಿಗಾಗಿ ಮತ್ತೊಮ್ಮೆ ಈ ರಾಜ್ಯದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಮತ್ತು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ರವಿಕುಮಾರ್ ಅವರನ್ನು ಕಾಣಬೇಕು ನನ್ನ ಆಸೆಯನ್ನು ಈಡೇರಿಸಿ ಎಂದು ಮನವಿ ಮಾಡಿದರು.
ಜೆಡಿಎಸ್ ಅಭ್ಯರ್ಥಿ ಬಿಎನ್ ರವಿಕುಮಾರ್ ಮಾತನಾಡಿ, ರೈತನಾದ ನಾನು ರಾಜಕಾರಣಕ್ಕೆ ಬರಲು ಮುಖ್ಯ ಕಾರಣ 1996 ರಲ್ಲಿ ದೇವೇಗೌಡರು ಪ್ರಧಾನಿಯಾದಾಗ ರಸಗೊಬ್ಬರಕ್ಕೆ ಶೇ 100 ರಷ್ಟು ಸಬ್ಸಿಡಿ ನೀಡಿದ್ದು. ರೈತನ ಮಗನೊಂದಿಗೆ ನಾವು ಕೆಲಸ ಮಾಡಬೇಕು ಮತ್ತು ಜೆಡಿಎಸ್ ಪಕ್ಷವನ್ನು ಈ ಭಾಗದಲ್ಲಿ ಕಟ್ಟಬೇಕೆಂದು ಆ ದಿನವೇ ತೀರ್ಮಾನಿಸಿದೆ.
ಹಣ ಸಂಪಾದಿಸಲು ನಾನು ರಾಜಕಾರಣ ಮಾಡಿದವನಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯಾದ ನಾನು ನಾಲ್ಕು ಸಾರ್ವತ್ರಿಕ ಚುನಾವಣೆ ಎದುರಿಸುವಲ್ಲಿ ಸಾಕಷ್ಟು ಕಷ್ಟಪಟ್ಟಿದ್ದೇನೆ. ಎಂದಿಗೂ ಅಧಿಕಾರಕ್ಕೆ ನಾನು ಕಣ್ಣೀರಿಟ್ಟಿಲ್ಲ ಎಂದರು.
ಈ ಕ್ಷೇತ್ರದಲ್ಲಿ ಅಧಿಕಾರ ಅನುಭವಿಸಿರುವ ನಾಯಕರು, ಈ ಕ್ಷೇತ್ರದ ಸ್ವಾಭಿಮಾನವನ್ನು ವ್ಯಾಪಾರೀಕರಣ ಮಾಡಿ 2023 ರ ವಿಧ್ನಾಸಭಾ ಚುನಾವಣೆಯಲ್ಲಿ ಹೊರಗಿನಿಂದ ಬಂದವರಿಗೆ ಸೂಚಕರಾಗಿ ನಾಮಪತ್ರ ಸಲ್ಲಿಸಿ ಚುನಾವಣೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಕುರಿತಂತೆ ಹೆಸರು ಹೇಳದೆ ಟೀಕಿಸಿ, ಈ ಕ್ಷೇತ್ರದ ಮತದಾರರು ಇದಕ್ಕೆ ತಕ್ಕ ಉತ್ತರವನ್ನು ಮೇ 10 ರಂದು ನೀಡಿ ಎಂದರು.
ನಾನು ರಾಜಕಾರಣ ಮಾಡುತ್ತಿರುವ ಮುಖ್ಯ ಉದ್ದೇಶ ಕ್ಷೇತ್ರದ ಅಭಿವೃದ್ದಿ ಮತ್ತು ಜನಸಾಮಾನ್ಯರ ನೆಮ್ಮದಿಯ ಬದುಕು. ಗ್ರಾಮಪಂಚಾಯಿತಿಯಿಂದ ಹಿಡಿದು ಎಲ್ಲಾ ಸ್ಥಳೀಯ ಸಂಸ್ಥೆಗಳು, ನಗರಸಭೆ ಎಲ್ಲೆಲ್ಲೂ ಜೆಡಿಎಸ್ ಪಕ್ಷ ರಾರಾಜಿಸಬೇಕು.
ಈಗಿರುವುದು ಬಿಜೆಪಿಯು ಬ್ರಿಟೀಷ್ ಜನತಾ ಪಾರ್ಟಿ, ಬ್ರಿಟೀಷರಂತೆ ಜನಸಾಮಾನ್ಯರ ತೆರಿಗೆ ಹಣವನ್ನು ಲೂಟಿ ಮಾಡುತ್ತಿರುವ ಪಕ್ಷ. ರೈತರು ಮತ್ತು ಜನಸಾಮಾನ್ಯರು ತಲೆಯೆತ್ತಿ ಬದುಕಬೇಕಾದರೆ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.
ಶಿಡ್ಲಘಟ್ಟ ನಗರದ ಮುಸ್ಲೀಮರಿರುವ ವಾರ್ಡುಗಳಲ್ಲಿ ಮತಯಾಚನೆಗೆ ಹೋದಾಗ ಅಲ್ಲಿನ ಪರಿಸ್ಥಿತಿಯನ್ನು ಕಂಡು ತುಂಬಾ ನೋವಾ್ಯಿತು. ಇದುವರೆಗೂ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷದವರು ಯಾವ ಹಕ್ಕಿನಿಂದ ಈ ವಾರ್ಡುಗಳಲ್ಲಿ ಮತ ಕೇಳುತ್ತಿದ್ದಾರೆ ಎಂದು ಅಚ್ಚರಿಯಾಯಿತು.. ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಪಕ್ಷದವರು ಕೇವಲ ಚುನಾವಣೆಯಲ್ಲಿ ಮತ ಹಾಕಲು ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ವಿಧಾನ ಪರಿಷತ್ತಿನ ಸದಸ್ಯ ಇಂಚರ ಗೋವಿಂದರಾಜು, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಝಫ್ರಲ್ಲಾ ಖಾನ್, ಜೆಡಿಎಸ್ ವಕ್ತಾರೆ ಯು.ಟಿ. ಫರ್ಝಾನ ಖಾನ್, ಬಂಕ್ ಮುನಿಯಪ್ಪ, ಮೇಲೂರು ಮಂಜುನಾಥ್, ಹೈದರ್ ಅಲೀ, ರಹಮತ್ತುಲ್ಲಾ, ಅಂಜದ್, ಎಚ್.ಎಸ್.ಫಯಾಝ್, ತಾಜ್ ಪಾಷ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ವೆಂಕಟೇಶ್, ಸದಾಶಿವ, ಮುಗಿಲಡಪಿ ನಂಜಪ್ಪ, ಕೆ ಎಸ್ ಮಂಜುನಾಥ್, ಉಮೇಶ್, ತಾದೂರು ರಘು, ಡಿ.ಎಂ.ಜಗದೀಶ್ವರ್ ಹಾಜರಿದ್ದರು.