ಜೆಡಿಎಸ್ ಪಕ್ಷ ಶ್ರೀಮಂತರ ಹಾಗೂ ನಾಯಕರ ಪಕ್ಷವಲ್ಲ ಬದಲಿಗೆ ಇದೊಂದು ಬಡವರ ಹಾಗೂ ರೈತರ ಪಕ್ಷ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡ ಹೇಳಿದರು.
ಶಿಡ್ಲಘಟ್ಟ ನಗರದ ಹೊರವಲಯದ ಹಂಡಿಗನಾಳದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಜನತೆಯ ಹಾಗೂ ರೈತರ ಪರವಾಗಿ ದುಡಿಯುವುದೇ ಜೆಡಿಎಸ್ ಪಕ್ಷದ ಮುಖ್ಯ ಗುರಿ, ಈ ಪಕ್ಷವನ್ನು ತೆಗೆಯಲು ಸಿದ್ದರಾಮಯ್ಯರ ಕೈಯ್ಯಲ್ಲೂ ಆಗಲ್ಲ ಹಾಗೆಯೇ ಈ ಜಿಲ್ಲೆಯ ಮತ್ತೋರ್ವ ಮಹಾನುಭಾವನನ್ನು ವಿದಾನಸಭೆ ಸ್ಪೀಕರ್ ಆಗಿಯೂ ಮಾಡಿದ್ದೆ, ಇಂತಹವರೆಲ್ಲಾ ಪಕ್ಷ ತೊರೆದು ಹೋದರೂ ಪಕ್ಷ ಇನ್ನೂ ಗಟ್ಟಿಯಾಗಿ ನಿಂತಿದೆಯೆಂದರೆ ಅದಕ್ಕೆ ಜೆಡಿಎಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಕಾರಣ ಎಂದರು.
ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ನ ಎಲ್ಲಾ ಭಾಗ್ಯಗಳಿಗೂ ಹಣ ನೀಡಿ ನಂತರ ರೈತರ ಸಾಲ ಮಾಡಿ ಎಂದು ಸಿದ್ದರಾಮಯ್ಯನವರು ಒತ್ತಡ ಹೇರಿದಾಗಲೂ ಅವರೆಲ್ಲಾ ಭಾಗ್ಯಗಳಿಗೂ ಹಣ ನೀಡಿ ರೈತರ ಸುಮಾರು 25 ಸಾವಿರ ಕೋಟಿ ರೂ ಸಾಲ ಮನ್ನಾ ಮಾಡಿದ್ದು ರೈತನೋರ್ವನ ಮಗನಾದ ಎಚ್.ಡಿ.ಕುಮಾರಸ್ವಾಮಿ ಮಾತ್ರ ಬೇರಾರಿಂದಲೂ ಸಾಲ ಮನ್ನಾ ಮಾಡಲು ಆಗಿಲ್ಲ ಎಂದರು.
ಹಾಗಾಗಿ ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ರೈತನ ಮಗನಾದ ವಕ್ಕಲೇರಿ ರಾಮುರಿಗೆ ಅತ್ಯಂತ ಹೆಚ್ಚಿನ ಮತಗಳು ನೀಡಿ ಜಯಶೀಲರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ಮಾತನಾಡಿ, ರಾಜಕಾರಣದಲ್ಲಿ ನಂಬಿಕೆ ಎನ್ನುವುದು ಬಹುಮುಖ್ಯವಾಗಿರುತ್ತದೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಇಡೀ ರಾಜ್ಯಧ್ಯಂತ ಎಲ್ಲಾ ಅಭ್ಯರ್ಥಿಗಳಿಗೂ ಒಂದೊಂದು ಬಿ ಫಾರಂ ನೀಡಿದರೆ ನನಗೆ ಪಕ್ಷದ ವರಿಷ್ಠರು ಎರಡು ಬಿ ಫಾರಂ ನೀಡಿದ್ದರು. ಪಕ್ಷ ಹಾಗೂ ವರಿಷ್ಠರು ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಜೊತೆಗೆ ನಾನು ಜೀವಂತವಾಗಿರುವವರೆಗೂ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಹಿನ್ನಡೆಯಾಗಲು ಬಿಡುವುದಿಲ್ಲ. ಕಾರ್ಯಕರ್ತರು ಯಾವುದೇ ಗೊಂದಲಗಳಿಗೆ ಕಿವಿಗೊಡಬಾರದು. ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ವಕ್ಕಲೇರಿ ರಾಮುರಿಗೆ ಕ್ಷೇತ್ರದಿಂದ ಹೆಚ್ಚಿನ ಮತಗಳು ನೀಡುವ ಮೂಲಕ ಜಯಶೀಲರನ್ನಾಗಿಸಲು ಎಲ್ಲರೂ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ವಕ್ಕಲೇರಿ ರಾಮು, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ತೂಪಲ್ಲಿ ಚೌಡರೆಡ್ಡಿ, ಜೆಡಿಎಸ್ ಜಿಲ್ಲಾದ್ಯಕ್ಷ ಕೆ.ಎಂ.ಮುನೇಗೌಡ, ಮಾಜಿ ಜಿ.ಪಂ ಸದಸ್ಯ ಬಂಕ್ ಮುನಿಯಪ್ಪ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಿ.ವಿ.ವೆಂಕಟೇಶ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್ ಹಾಜರಿದ್ದರು.