ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯಲ್ಲಿ ಮಂಗಳವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮನೆಮನೆಗೂ ತೆರಳಿ ಸುಮಾರು 1500 ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿ ಕಾಂಗ್ರೆಸ್ ಮುಖಂಡ ಹಾಗೂ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ (ಪುಟ್ಟು) ಮಾತನಾಡಿದರು.
ಈಗಾಗಲೇ ಹಲವಾರು ಸಾವು ನೋವುಗಳನ್ನು ನಾವು ಕಂಡಿದ್ದೇವೆ. ಈಗಲೂ ತಾಲ್ಲೂಕಿನಲ್ಲಿ ಲಸಿಕೆ ಹಾಕಿಸಿಕೊಳ್ಳದವರ ಪ್ರಮಾಣ ಹೆಚ್ಚಿದೆ. ನಾವೆಲ್ಲರೂ ಲಸಿಕೆ ಹಾಕಿಸಿಕೊಂಡು ನಮ್ಮ ದೇಹವನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ಸಜ್ಜುಗೊಳಿಸಿಕೊಳ್ಳಬೇಕಿದೆ. ವಿದ್ಯಾವಂತ ಯುವಕರು ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಕೊರೊನಾ ಎಂಬ ಸುನಾಮಿ ಬಡವ ಬಲ್ಲಿದ ಜಾತಿ ಭೇದವಿಲ್ಲದೆ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಈ ಸಂದರ್ಭದಲ್ಲಿ ಕೊರೊನಾ ಅಲೆಯನ್ನು ತಡೆಗಟ್ಟಲು ಸರ್ಕಾರ ಲಾಕ್ ಡೌನ್ ಆದೇಶಿಸಿದ್ದರಿಂದ ದೈನಂದಿನ ದುಡಿಮೆಗೆ ಕಷ್ಟವಾಯಿತು. ಇತ್ತ ಕೊರೊನಾ ತಡೆಗಟ್ಟಬೇಕು, ಅತ್ತ ದುಡಿಮೆಯಿಲ್ಲದೆ ತೊಂದರೆಗೊಳಗಾದವರ ಕಷ್ಟ ಸಹ ಪರಿಹರಿಸಬೇಕಾಗಿದೆ. ಈ ಸಂದರ್ಭದಲ್ಲಿ ಕಷ್ಟದಲ್ಲಿರುವವರ ಬೆನ್ನ ಹಿಂದೆ ನಾವಿದ್ದೇವೆ, ನಮ್ಮ ಕೈಲಾದಷ್ಟು ನೆರವನ್ನು ನೀಡುವ ಮೂಲಕ ಅಳಿಲು ಸೇವೆ ಮಾಡುತ್ತಿದ್ದೇವೆ. ಇದು ಮಾನವಧರ್ಮವಷ್ಟೇ ಹೊರತು ಯಾವುದೇ ರೀತಿಯ ಫಲಾಪೇಕ್ಷೆಗಳಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಂಗಮಕೋಟೆ ಗ್ರಾಮ ಪಂಚಾಯಿತಿಯ ಕಾಂಗ್ರೆಸ್ ಸದಸ್ಯರು ಹಾಗೂ ಮುಖಂಡರು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ಅವರನ್ನು ಗೌರವಿಸಿ, ಕಷ್ಟದಲ್ಲಿರುವವರ ನೆರವಿಗೆ ಧಾವಿಸುವ ಸಹೃದಯಿಗೆ ನಾವೆಲ್ಲರೂ ಬೆಂಬಲಿಸಿ, ಜೊತೆಗೂಡುವುದಾಗಿ ಹೇಳಿದರು. ಎಸ್.ಎನ್.ಕ್ರಿಯಾ ಟ್ರಸ್ಟ್ ಕಾರ್ಯದರ್ಶಿ ಆನೂರು ದೇವರಾಜ್, ಕೆ.ಪಿ.ಸಿ.ಸಿ ಸದಸ್ಯ ನಾರಾಯಣಸ್ವಾಮಿ ಬಂಗಾರಪ್ಪ, ಮುನಿರಾಜು, ಆನಂದ್, ವೆಂಕಟೇಶ್, ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.