Jangamakote, Sidlaghatta : ಪೌಷ್ಟಿಕ, ಸಮತೋಲನ ಆಹಾರ ಸೇವನೆಯಿಂದ ಗರ್ಭಿಣಿ ಮತ್ತು ಮಗು ಇಬ್ಬರು ಆರೋಗ್ಯವಂತರಾಗಿರಲು ಸಾಧ್ಯ. ಉತ್ತಮ ಆರೋಗ್ಯವಂತ ಗರ್ಭಿಣಿ ಹಾಗೂ ಮಕ್ಕಳು ದೇಶದ ಅಭಿವೃದ್ದಿಯಲ್ಲಿ ಮುಖ್ಯ ಪಾತ್ರವಹಿಸುತ್ತಾರೆ ಎಂದು ಸಿ.ಡಿ.ಪಿ.ಒ ವಿದ್ಯಾ ಎ.ವಸ್ತ್ರದ್ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಜಂಗಮಕೋಟೆ ಕ್ಲಸ್ಟರ್ ವತಿಯಿಂದ ಹಮ್ಮಿಕೊಂಡಿದ್ದ ಪೋಷಣ್ ಅಭಿಯಾನ ಮಾಸಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಿಗೆ ಪೌಷ್ಟಿಕತೆಯ ಕೊರತೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಪೋಷಣ್ ಮಾಸಾಚರಣೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಮತ್ತು ಆರು ವರ್ಷದ ಒಳಗಿನ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ನೀಡುವ ಕಾರ್ಯಕ್ರಮ ಇದೆ. ಜತೆಗೆ ತಾಯಂದರಿಗೆ ಪೌಷ್ಟಿಕ ಆಹಾರದ ಸೇವನೆಯ ಬಗೆ, ಅದರ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವ ಕಾರ್ಯಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ನಮ್ಮ ಸುತ್ತ ಮುತ್ತ ಸಿಗುವ ನಾನಾ ಬಗೆಯ ಸೊಪ್ಪು ತರಕಾರಿ ಹಣ್ಣು ಮತ್ತು ಮನೆಯಲ್ಲಿ ತಯಾರಿಸುವಂತ ಪೌಷ್ಟಿಕ ಆಹಾರಗಳನ್ನು ತಯಾರಿಸಿ ಪ್ರದರ್ಶನಕ್ಕಿಟ್ಟು ಅವುಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಎಸಿಡಿಪಿಒ ಲಕ್ಷ್ಮೀದೇವಮ್ಮ, ಜಂಗಮಕೋಟೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ , ಸುಪ್ರಜ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗರ್ಭಿಣಿ ಸ್ತ್ರೀಯರು, ಗ್ರಾಮದ ಮಹಿಳೆಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.