ನಗರದ ಶ್ರೀ ಕಾಳಿಕಾಂಬ ಕಮ್ಮಠೇಶ್ವರ ಸಮುದಾಯ ಭವನದಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಆಯೋಜಿಸಲಾಗಿದ್ದ ಜನಮಂಗಳ ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ವಿವಿಧ ಸಲಕರಣೆಗಳನ್ನು ವಿತರಿಸಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಸೀನಪ್ಪ ಮಾತನಾಡಿದರು.
ವಿಕಲಚೇತನರಿಗೆ ಅನುಕಂಪ ಸೂಚಿಸುವ ಬದಲಿಗೆ ಅವರಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ ಅವಕಾಶ ಕಲ್ಪಿಸಿದರೆ ವಿಕಲಚೇತನರು ಸಹ ಸ್ವಾಭಿಮಾನಿ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಜನಮಂಗಳ ಯೋಜನೆಯಡಿ ಈಗಾಗಲೇ ಸುಮಾರು 8.5 ಲಕ್ಷ ಅನುದಾನದಲ್ಲಿ 436 ವ್ಹೀಲ್ ಚೇರ್ ಸೇರಿದಂತೆ ವಾಕಿಂಗ್ ಸ್ಞಿಕ್, ವಾಟರ್ ಬೆಡ್, ಟ್ರೈಸಿಕಲ್ ವಿತರಿಸಲಾಗಿದೆ. ರಾಜ್ಯಾಧ್ಯಂತ ಈಗಾಗಲೇ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಆರು ಲಕ್ಷ ಸ್ವಸಹಾಯ ಸಂಘಗಳಿದ್ದು ಸುಮಾರು 60 ಲಕ್ಷ ಮಂದಿ ಗ್ರಾಮಾಭಿವೃದ್ದಿ ಯೋಜನೆಯ ವಿವಿಧ ಸವಲತ್ತುಗಳನ್ನು ಪಡೆದುಕೊಂಡಿದ್ದಾರೆ ಎಂದರು.
ತಾ.ಪಂ ಇಓ ಚಂದ್ರಕಾಂತ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಾ.ಡಿ.ವೀರೇಂದ್ರಹೆಗ್ಗಡೆ ಅವರ ದೂರದೃಷ್ಠಿಯ ಫಲವಾಗಿ ಇಂದು ರಾಜ್ಯಾಧ್ಯಂತ ಗ್ರಾಮಾಭಿವೃದ್ದಿ ಯೋಜನೆಯಡಿ ವಿವಿಧ ಸೇವಾ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ, ಕೊರೋನಾ ಹಿನ್ನಲೆಯಲ್ಲಿ ಸರ್ಕಾರ ಮಾಡಬೇಕಾದ ಕೆಲಸಗಳನ್ನು ಗ್ರಾಮಾಭಿವೃದ್ದಿ ಸಂಸ್ಥೆ ಮಾಡುತ್ತಿದೆ ಎಂದರು.
ಜಿಲ್ಲಾ ನಿರ್ದೇಶಕ ವಸಂತ್, ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್, ಜಿಲ್ಲಾ ಜನಜಾಗೃತಿ ಸಮಿತಿಯ ಸದಸ್ಯರಾದ ವೆಂಕಟಸ್ವಾಮಿರೆಡ್ಡಿ, ಎ.ಎಂ.ತ್ಯಾಗರಾಜ್, ನಾಗೇಂದ್ರ, ಶ್ರೀ ಸರಸ್ವತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್, ಮತ್ತಿತರರು ಹಾಜರಿದ್ದರು.