J Venkatapura, Sidlaghatta : ಕಾರು ಮತ್ತು ಬಸ್ ನಡುವೆ ಮುಖಾ ಮುಖಿ ಡಿಕ್ಕಿಯಾಗಿ ಕಾರಿನಲ್ಲಿ ಸಂಚರಿಸುತ್ತಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದು ಇನ್ನೊಬ್ಬ ಮಹಿಳೆ ಗಾಯಗೊಂಡಿದ್ದಾಳೆ.
ಶಿಡ್ಲಘಟ್ಟ ತಾಲ್ಲೂಕು ಜೆ.ವೆಂಕಟಾಪುರ ಗ್ರಾಮ ಬಳಿ ಬದ್ರನಕೆರೆ ಕಟ್ಟೆ ಮೇಲೆ ಭಾನುವಾರ ನಡೆದ ಅಪಘಾತದಲ್ಲಿ ದೇವನಹಳ್ಳಿ ತಾಲೂಕು ದಾಸರಹಳ್ಳಿ ಗ್ರಾಮ ವಾಸಿಗಳಾದ ಮುನಿನಂಜಮ್ಮ(70), ಪುತ್ರ ಸ್ವಾಮೀಜಿ(45) ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇನ್ನೊಬ್ಬಾಕೆ ರತ್ನಮ್ಮ(75)ಗಾಯಗೊಂಡಿದ್ದಾಳೆ.
ಮೃತಪಟ್ಟ ಮುನಿನಂಜಮ್ಮಳಿಗೆ ಹುಳುಕಾಟ ಸಮಸ್ಯೆಯಿದ್ದು ಅದಕ್ಕೆ ಔಷಧಿ ಕೊಡಿಸಿಕೊಳ್ಳಲೆಂದು ಕೋಲಾರ ತಾಲ್ಲೂಕು ವೇಮಗಲ್‌ಗೆ ಕಾರಿನಲ್ಲಿ ತೆರಳುವಾಗ ವಿಜಯಪುರ-ಕೋಲಾರ ಮಾರ್ಗದ ಜೆ.ವೆಂಕಟಾಪುರ ಬಳಿ ಬದ್ರನಕೆರೆ ಕಟ್ಟೆ ಮೇಲೆ ಅಪಘಾತ ಸಂಭವಿಸಿದೆ.
ಕೋಲಾರದ ಕಡೆಯಿಂದ ಬಂದ ಖಾಸಗಿ ಕಂಪನಿ ಬಸ್ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿದೆ. ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಶವಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.