Nadipinayakanahalli, Sidlaghatta : ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜು, ನಡಿಪಿನಾಯಕನಹಳ್ಳಿ ಸಹಯೋಗದಲ್ಲಿ ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ಕಪಿಲಮ್ಮ ಕಾಲೇಜಿನಲ್ಲಿ ಚಂದ್ರ ಯಾನ-3 , ಇಸ್ರೋ ಸಾಧನೆಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಇಸ್ರೋ ವಿಜ್ಞಾನಿ ಶ್ರೀನಾಥ ರತ್ನಕುಮಾರ ಉದ್ಘಾಟಿಸಿ ಮಾತನಾಡಿ, ಭಾರತೀಯರ ಹೆಮ್ಮೆಯ ಸಂಸ್ಥೆ ಇಸ್ರೋ ಮಾಂಗಳಯಾನ , ಚಂದ್ರಯಾನ – 3 , ಆದಿತ್ಯ ಎಲ್ 1 ಮುಂತಾದ ನಿರಂತರ ಕಾರ್ಯಚಟುವಟಿಕೆಗಳ ಮೂಲಕ ಇಡೀ ವಿಶ್ವಕ್ಕೆ ಭಾರತೀಯ ವಿಜ್ಞಾನಿಗಳು ಯಾರಿಗೂ ಕಡಿಮೆ ಇಲ್ಲ ಎಂದು ಸಾರಿದೆ ಎಂದರು.
ನಿರಂತರ ಅಧ್ಯಯನ , ಚಟುವಟಿಕೆಗಳು , ಪ್ರಯೋಗಗಳು ಮತ್ತು ಹೊಸ ಹೊಸ ಅವಿಷ್ಕಾರಗಳತ್ತ ಇಸ್ರೋ ಹೆಜ್ಜೆ ಹಾಕಿ ಪ್ರತಿಯೊಬ್ಬ ಭಾರತೀಯರು ಹೆಮ್ಮೆಪಡುವಂತಾಗಿದೆ ಎಂದರು.
ಸುಮಾರು ಎರಡು ಗಂಟೆಗಳ ಕಾಲ ಇಸ್ರೋ ಸಂಸ್ಥೆ ಸ್ಥಾಪನೆ , ಚಟುವಟಿಕೆ , ಇಸ್ರೋ ವಿಜ್ಞಾನಿಗಳ ಕೊಡುಗೆ, ಇಸ್ರೋ ಮಹತ್ವದ ಕಾರ್ಯಕ್ರಮಗಳ ಬಗ್ಗೆ ಪಿಪಿಟಿ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಪರಿಚಯಿಸಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಕಸಾಪ ವಿಜ್ಞಾನಿಗಳನ್ನು ಶಿಡ್ಲಘಟ್ಟಕ್ಕೆ ಆಹ್ವಾನಿಸಿ ಅವರ ಜ್ಞಾನವನ್ನು , ವಿಜ್ಞಾನ ಕ್ಷೇತ್ರದ ಸಾದನೆಗಳನ್ನು ನಮ್ಮ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಪರಿಚಯಿಸಿ , ವಿಜ್ಞಾನ ಕ್ಷೇತ್ರದತ್ತ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುತ್ತಿದೆ ಎಂದರು.
ಶಿಡ್ಲಘಟ್ಟ ತಾಲ್ಲೂಕು ಕಸಾಪ ಮತ್ತು ಕಪಿಲಮ್ಮ ಕಾಲೇಜು ವತಿಯಿಂದ ಇಸ್ರೋ ವಿಜ್ಞಾನಿ ಶ್ರೀನಾಥ ರತ್ನಕುಮಾರ ಮತ್ತು ಎನ್. ಆರ್. ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಇಸ್ರೋ ವಿಜ್ಞಾನಿ ಶ್ರೀನಾಥ ರತ್ನಕುಮಾರ ಅವರ ಹಸ್ತಾಕ್ಷರ ಪಡೆಯಲು ಮುಗಿಬಿದ್ದರು.
ಕಪಿಲಮ್ಮ ಸಂಯುಕ್ತ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಎನ್.ಆರ್.ಕೃಷ್ಣಮೂರ್ತಿ, ಕಸಾಪ ಜಿಲ್ಲಾ ಕಾರ್ಯದರ್ಶಿ ಅಮೃತಕುಮಾರ್, ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ , ನಿ.ಪೂ.ಅಧ್ಯಕ್ಷ ಎ.ಎಂ.ತ್ಯಾಗರಾಜ್ , ಡಾ.ಬಿ.ಕೆ.ರಮೇಶ್. ಎನ್.ಕೆ.ಗುರುರಾಜರಾವ್ , ಎ.ಆರ್.ಎಂ. ಪಿಯು ಕಾಲೇಜಿನ ಪ್ರಾಂಶುಪಾಲ ಮೂರ್ತಿ ಸಾಮ್ರಾಟ್ , ಸಚಿನ್ , ಅಜಿತ್ ಕೌಂಡಿನ್ಯ , ಶಿಕ್ಷಕ ಸುಂದರನ್, ನವೋದಯ ಶಾಲೆಯ ಮುಖ್ಯೋಪಾಧ್ಯಾಯ ಎನ್.ಕೆ.ಸತ್ಯನಾರಾಯಣ, ಎನ್.ಕೆ.ಸುದರ್ಶನ್ , ಕಪಿಲಮ್ಮ ಪಿಯು ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.