Sidlaghatta : ಶಿಡ್ಲಘಟ್ಟ ನಗರದಲ್ಲಿನ ಖಾಸಗಿ ಕ್ಲಿನಿಕ್ ವೊಂದರ ಮೇಲೆ ಶನಿವಾರ ರಾತ್ರಿ ದಿಢೀರ್ ದಾಳಿ ನಡೆಸಿದ ಅಧಿಕಾರಿಗಳ ತಂಡಕ್ಕೆ ಕ್ಲಿನಿಕ್‌ನಲ್ಲಿ ಆಯುಷ್ ವೈದ್ಯೆಯೊಬ್ಬರು ಆಲೋಪಥಿಕ್ ಚಿಕಿತ್ಸೆ ನೀಡುತ್ತಿದ್ದದ್ದು ಕಂಡು ಬಂದಿದ್ದು ಕ್ಲಿನಿಕ್‌ಗೆ ಬೀಗ ಜಡಿದು ಸಿಬ್ಬಂದಿಗೆ ನೊಟೀಸ್ ನೀಡಿದ್ದಾರೆ.
ರೇಷ್ಮೆಗೂಡು ಮಾರುಕಟ್ಟೆ ಹಿಂಭಾಗದ ಆನಂದ್ ಕ್ಲಿನಿಕ್ ಗೆ ಶನಿವಾರ ರಾತ್ರಿ ದಾಳಿ ನಡೆಸಿದ್ದು ಕ್ಲಿನಿಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಯುಷ್ ವೈದ್ಯೆ ಸರಸ್ವತಿ ಅವರು ಆಲೋಪಥಿಕ್ ಪದ್ದತಿಯ ಚಿಕಿತ್ಸೆ ನೀಡುತ್ತಿದ್ದದ್ದು ಕಂಡು ಬಂದಿದೆ. ಆಯುಷ್ ವೈದ್ಯೆ ಹಾಗೂ ಸ್ಟಾಫ್ ನರ್ಸ್ ಸುಧಾ ಅವರಿಂದ ಹೇಳಿಕೆ ಪಡೆದು ನೊಟೀಸ್ ನೀಡಲಾಗಿದೆ.
ಸರ್ಕಾರಿ ವೈದ್ಯರಾಗಿ ನಿವೃತ್ತರಾದ ಡಾ.ಆನಂದ್ ಅವರು ಈ ಹಿಂದೆ ಈ ಕ್ಲಿನಿಕ್ ಅನ್ನು ನಡೆಸುತ್ತಿದ್ದರು. ಇವರ ಹೆಸರಲ್ಲೇ ಕ್ಲಿನಿಕ್ ನೋಂದಣಿ ಆಗಿದ್ದು ಅಲ್ಲಿ ಆಯುಷ್ ವೈದ್ಯೆ ಸರಸ್ವತಿ, ಸ್ಟಾಫ್ ನರ್ಸ್ ಸುಧಾ ಕಾರ್ಯನಿರ್ವಹಿಸುತ್ತಿದ್ದರು.
ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿ ಮೇಲಿನ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ದಾಳಿಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆಯೂ ಈ ಕ್ಲಿನಿಕ್‌ನಲ್ಲಿ ವೈದ್ಯಕೀಯ ಚಿಕಿತ್ಸಾ ನಿಯಮಗಳನ್ನು ಉಲ್ಲಂಘನೆ ಮಾಡಿದ ಬಗ್ಗೆ ಎರಡು ಭಾರಿ ನೊಟೀಸ್ ನೀಡಲಾಗಿತ್ತು.
ತಹಶೀಲ್ದಾರ್ ಬಿ.ಎನ್.ಸ್ವಾಮಿ, ತಾಲ್ಲೂಕು ಪಂಚಾಯಿತಿ ಇ.ಒ ಜಿ.ಮುನಿರಾಜ, ಸಿಪಿಐ ಎಂ.ಶ್ರೀನಿವಾಸ್, ನಗರಠಾಣೆಯ ಎಸ್.ಐ ವೇಣುಗೋಪಾಲ್, ತಾಲ್ಲೂಕು ಆರೋಗ್ಯಾಕಾರಿ ಡಾ.ವೆಂಕಟೇಶ್‌ಮೂರ್ತಿ, ಆರೋಗ್ಯ ನಿರೀಕ್ಷಣಾಕಾರಿ ದೇವರಾಜ್ ಹಾಗೂ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.