Sidlaghatta : ಸಮಾಜದಲ್ಲಿ ಇದೀಗ ಮಾನವ ಕಳ್ಳ ಸಾಗಾಣಿಕೆಯು ಬಹುದೊಡ್ಡ ಸಮಸ್ಯೆಯಾಗಿ ಬೆಳೆದಿದ್ದು, ಅದರಲ್ಲೂ ಮಾನವ ಕಳ್ಳ ಸಾಗಾಣಿಕೆಗೆ ಹೆಚ್ಚಾಗಿ ಬಲಿಯಾಗುತ್ತಿರುವವರು ಹೆಂಗಸರು ಮತ್ತು ಮಕ್ಕಳು. ಇದರಿಂದ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಜಂಗಮಕೋಟೆ ಪೊಲೀಸ್ ಹೊರ ಟ್ಃಆಣೆಯ ಸಬ್ ಇನ್ಸ್ ಪೆಕ್ಟರ್ ವಿ.ಸುಬ್ರಮಣಿ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ವೃತ್ತದಲ್ಲಿ ಶನಿವಾರ ಜೇಸಿಐ ದೇವನಹಳ್ಳಿ ಡೈಮಂಡ್ಸ್, ಮೂಮೆಂಟ್ ಇಂಡಿಯಾ ಹಾಗೂ ಆಂಧ್ರ ಪ್ರದೇಶದ ಮದನಪಲ್ಲಿಯ ಗ್ರಾಮ ಜ್ಯೋತಿ ಸೊಸೈಟಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ವಾಕ್ ಫಾರ್ ಫ್ರೀಡಂ- ಮಕ್ಕಳ ಕಳ್ಳ ಸಾಗಾಣಿಕೆ ತಡೆಗಟ್ಟಲು ಜನಜಾಗೃತಿ ಮೂಡಿಸುವ ಸ್ವಾತಂತ್ರ್ಯ ನಡಿಗೆ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳನ್ನು ಪೋಷಕರು ತುಂಬಾ ಜಾಗರೂಕತೆಯಿಂದ ಬೆಳೆಸಬೇಕು. ಮಕ್ಕಳಿಗೆ ಯಾವುದು ಸರಿ ಯಾವುದು ತಪ್ಪು ಎಂಬ ವಿಚಾರಗಳನ್ನು ತಿಳಿಸಿಕೊಡಬೇಕು ಹಾಗೂ ಮಾನವ ಕಳ್ಳ ಸಾಗಾಣಿಕೆಯ ಕಾಯ್ದೆ ಕಾನೂನುಗಳ ಬಗ್ಗೆ ಎಲ್ಲರಲ್ಲಿ ಅರಿವು ಮೂಡಿಸಬೇಕು. ಇಂತಹ ಜಾಥ, ಬೀದಿ ನಾಟಕ, ಅರಿವಿನ ಕರಪತ್ರ, ಗೋಡೆ ಬರಹ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಎಲ್ಲರಲ್ಲೂ ಜಾಗೃತಿ ಮೂಡಿಸಿ ನಾವೆಲ್ಲರೂ ಈ ಮಾನವ ಕಳ್ಳ ಸಾಗಾಣಿಕೆಯನ್ನು ನಿರ್ಮೂಲನೆ ಮಾಡಬೇಕು ಎಂದರು.
ಶಾಲಾ ಕಾಲೇಜುಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ತಮ್ಮ ಪೋಷಕರು ಹಾಗೂ ಶಿಕ್ಷಕರು ನೀಡುವ ಮಾರ್ಗಸೂಚಿಗಳನ್ನು ಜಾಗ್ರತೆಯಿಂದ ಪಾಲಿಸಬೇಕು. ಮಾನವನ ಕಳ್ಳ ಸಾಗಾಣಿಕೆಯ ಬಗ್ಗೆ ಎಚ್ಚರವಿರಬೇಕು ಮತ್ತು ಅಪರಿಚಿತ ವ್ಯಕ್ತಿಗಳು ತಮ್ಮನ್ನು ಹಿಂಬಾಲಿ ಸುವುದು ಕಂಡು ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ತಮ್ಮನ್ನು ತಾವು ಮೊದಲು ರಕ್ಷಿಸಿ ಕೊಳ್ಳಬೇಕೆಂದು ಹೇಳಿದರು.
ಸುಗುಟೂರು ರಸ್ತೆಯ ಬಾಲಾಜಿ ವಿದ್ಯಾನಿಕೇತನದ ಅಧ್ಯಕ್ಷ ಆರ್. ಮುನಿರಾಜು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಮಕ್ಕಳ ಹಾಗೂ ಮಹಿಳೆಯರ ಕಳ್ಳ ಸಾಗಾಣಿಕೆ ಮಿತಿಮೀರಿ ನಡೆಯುತ್ತಿದೆ. ಈ ವಾಕ್ ಫಾರ್ ಸೇಡಂ ಎಂಬ ಶೀರ್ಷಿಕೆಯ ಸ್ವಾತಂತ್ರ್ಯ ನಡಿಗೆ ಮಕ್ಕಳ ಕಳ್ಳ ಸಾಗಾಣಿಕೆ ತಡೆಗಟ್ಟಲು ಜನಜಾಗೃತಿ ಮೂಡಿಸುವ ಜಾಥವಾಗಿದೆ. ಇಂದು ಮಾನವನನ್ನು ಅಪಹರಿಸಿ ಅವನ ಅಂಗಗಳನ್ನು ಬೇರ್ಪಡಿಸುವ ಕಾರ್ಯ ಹೆಚ್ಚಾಗುತ್ತಿದೆ. ಅದರಲ್ಲೂ ಮಕ್ಕಳನ್ನ ಮಹಿಳೆಯರನ್ನು ಅಪರಿಸಿ ಅವರಿಂದ ಬಲವಂತದ ದುಡಿಮೆ, ಲೈಂಗಿಕ ಕಿರುಕುಳ ಮತ್ತು ಮಾರಾಟ ಹೆಚ್ಚಾಗುತ್ತಿದೆ. ಆದ್ದರಿಂದ ಮೊದಲು ನಮ್ಮನ್ನು ನಾವು ರಕ್ಷಿಸಿಕೊಂಡು ಈ ಮಾನವ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟಿ ವಿಶ್ವಶಾಂತಿ ಸ್ಥಾಪಿಸಬೇಕೆಂದು ನುಡಿದರು.
ಜೇಸಿಐ ದೇವನಹಳ್ಳಿ ಡೈಮಂಡ್ಸ್ ನ ಅಧ್ಯಕ್ಷ ಜೇಸಿ.ಜಿ.ಎನ್. ಪ್ರಶಾಂತ್ ಕುಮಾರ್ ಮಾತನಾಡಿ, ಸ್ವಾತಂತ್ರ್ಯ ನಡಿಗೆ ಜಾಥಾ ನಡೆಸುವ ಉದ್ದೇಶ, ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟುವುದು, ಮಾನವ ಹಕ್ಕುಗಳ ರಕ್ಷಣೆ, ಗಂಡು ಮತ್ತು ಹೆಣ್ಣು ಮಕ್ಕಳ ಹಾಗೂ ಮಾನವನ ಅಪಹರಣ ಮಾಡಿ ಅವರುಗಳ ಅಂಗಾಂಗಗಳನ್ನು ಅಪಹರಿಸುವುದು ಮತ್ತು ಮಕ್ಕಳನ್ನು ಅಪಹರಿಸಿ ದೂರದ ವಿವಿಧ ಸ್ಥಳಗಳಲ್ಲಿ ಭಿಕ್ಷೆ ಬೇಡಲು ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ಬಳಸಿ ಕೊಳ್ಳುವುದರ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಾಗಿದೆ ಎಂದರು.
ಈ ಸಂದರ್ಭದಲ್ಲಿ ಸ್ವಾತಂತ್ರ್ಯ ನಡಿಗೆಯ ಜಾಗೃತಿ ಪ್ರತಿಜ್ಞಾವಿಧಿಯನ್ನ ಬಾಲಾಜಿ ವಿದ್ಯಾನಿಕೇತನದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಾಲಾ ಬೋಧಿಸಿದರು.
ರಾಜ್ಯ ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ, ಜಂಗಮಕೋಟೆ ಠಾಣಾ ಪೊಲೀಸ್ ಪೇದೆ ಆರ್. ರಾಜಕುಮಾರ್, ಜೇಸಿಐ ದೇವನಹಳ್ಳಿ ಡೈಮಂಡ್ಸ್ ನ ಕಾರ್ಯದರ್ಶಿ ಮಂಡಿಬೆಲೆ ಗಂಗಾಧರ್, ನಾರಾಯಣಪುರ ದ ಶ್ರೀ ಸಾಯಿ ಜ್ಞಾನಗಂಗಾ ಪ್ರಥಮ ದರ್ಜೆ ಕಾಲೇಜಿನ ಸ್ವಯಂಸೇವಕ ನಿಖಿಲ್, ವಿಜಯಪುರದ ಲೇಖಕ ವಿ.ಅಕ್ಷಯ್, ಬಾಲಾಜಿ ವಿದ್ಯಾನಿಕೇತನದ ಆಡಳಿತ ಅಧಿಕಾರಿ ಪ್ರಭ ಪ್ರಶಾಂತ್, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಮಾಲಾ, ಪುಷ್ಪ, ದೈಹಿಕ ಶಿಕ್ಷಕ ಚಂದ್ರು, ಮುಖ್ಯ ಶಿಕ್ಷಕ ಮಂಜುನಾಥ್, ಸಹ ಶಿಕ್ಷಕರಾದ ಚಂದ್ರು, ಹರೀಶ್, ಸ್ವಾತಿ, ಮಧುಶ್ರೀ, ಕಾವ್ಯ, ಸುಶೀಲ,ಅನಿಲ್, ನಾಗಾರ್ಜುನ ಹಾಗೂ ಬೋಧಕೇತರ ಸಿಬ್ಬಂದಿ ಜಯರಾಮಣ್ಣ ಮತ್ತು ನಾಗೇಶ್ ಹಾಜರಿದ್ದರು.