Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿ ಗೇಟ್ ಬಳಿ ಇರುವ ರಿಚ್‌ಮಂಡ್ ಫೆಲೋಷಿಫ್ ಮಾನಸಿಕ ವಿಕಲಚೇತನರ (Hospital for Mentally challenged) ಚಿಕಿತ್ಸಾ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿದ ಸಚಿವ ಎ.ನಾಗರಾಜ್ ಅವರು ವೈಯಕ್ತಿಕವಾಗಿ ಸುಮಾರು ಒಂದು ಲಕ್ಷ ರೂ.ಮೊತ್ತದ ಔಷಧಿಗಳನ್ನು ಕೊಡುಗೆಯಾಗಿ ನೀಡಿ ಜಿಲ್ಲಾ ಉಸ್ತುವಾರಿ ಸಚಿವ ಎ.ನಾಗರಾಜ್ (MTB Nagaraj) ಅವರು ಮಾತನಾಡಿದರು.
ಸಮಾಜದಲ್ಲಿ ಹಣವಂತರು, ಶ್ರೀಮಂತರು ಬಹಳಷ್ಟಿದ್ದಾರದರೂ ಮತ್ತೊಬ್ಬರಿಗೆ ನೆರವಾಗುವ ಮನಸ್ಸುಗಳಿರುವುದಿಲ್ಲ. ದಾನಗಳಲ್ಲಿ ಶಿಕ್ಷಣ ಹಾಗೂ ಆರೋಗ್ಯ ದಾನ ಪ್ರಮುಖವಾಗಿದ್ದು, ಇವೆರಡಕ್ಕೂ ತಮ್ಮ ಕೈಲಾದ ದಾನ ಮಾಡಿದರೆ ನಮ್ಮ ನಂತರವೂ ನಮ್ಮ ಹೆಸರುಗಳು ಉಳಿಯುತ್ತವೆ. ಹಾಗಾಗಿ ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಸಿಗಲಿ ಎಂಬ ಉದ್ದೇಶದಿಂದ ಗಳಿಸಿದ ಒಂದಷ್ಟು ಪಾಲನ್ನು ದಾನ ಧರ್ಮ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.
ರಿಚ್‌ಮಂಡ್ ಫೆಲೋಷಿಫ್ ಮಾನಸಿಕ ವಿಕಲಚೇತನರ ಚಿಕಿತ್ಸಾ ಕೇಂದ್ರದ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್ ಮಾತನಾಡಿ, 2004 ರಲ್ಲಿ ಪ್ರಾರಂಭವಾದ ಸಂಸ್ಥೆ ಈವರೆಗೂ ಸುಮಾರು 5015 ನೋಂದಾಯಿತ ರೋಗಿಗಳಿಗೆ ಉಚಿತ ಔಷಧಿಗಳೊಂದಿಗೆ ಅಗತ್ಯ ವೈದ್ಯಕೀಯ ಸೇವೆ ಸಲ್ಲಿಸುತ್ತಾ ಬಂದಿದ್ದು ಕಳೆದ 18 ವರ್ಷಗಳಲ್ಲಿ ಮಾನಸಿಕ ಆರೋಗ್ಯ ಶಿಬಿರಗಳ ಮೂಲಕ ಸುಮಾರು 63 ಸಾವಿರ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ. ಇಂತಹ ಸಂಸ್ಥೆಗೆ ಈವರೆಗೂ ಸರ್ಕಾರದಿಂದ ಯಾವುದೇ ಸವಲತ್ತು ಸಿಕ್ಕಿಲ್ಲ. ತಿಂಗಳಿಗೆ ಎರಡು ಭಾರಿ ಮನೋವೈದ್ಯರನ್ನು ಕರೆಸುವುದು ಸೇರಿದಂತೆ ರೋಗಿಗಳಿಗೆ ತಿಂಡಿ, ಊಟ ಹಾಗು ಸಂಸ್ಥೆಯ ಸಿಬ್ಬಂದಿಗೆ ಸಂಬಳ ನೀಡಲು ತಿಂಗಳಿಗೆ ಕನಿಷ್ಠ 50 ಸಾವಿರ ಖರ್ಚು ಬರುತ್ತಿದ್ದು ತಾವು ತಮ್ಮ ಸಂಸ್ಥೆಯಿಂದಾಗಲಿ, ಅಥವ ತಮ್ಮ ಆಪ್ತರಿಂದಾಗಲಿ ಅಥವ ಸರ್ಕಾರದಿಂದಾಗಲಿ ನಮ್ಮ ಸಂಸ್ಥೆಗೆ 2 ಕೋಟಿ ರೂ ಹಣಕಾಸಿನ ಸಹಾಯ ಮಾಡಿದಲ್ಲಿ ಅದನ್ನು ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಮಾಡಿ ಬರುವ ಬಡ್ಡಿ ಹಣದಲ್ಲಿ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗಲು ಸಹಕಾರಿಯಾಗುತ್ತದೆ ಎಂದು ಸಚಿವರಲ್ಲಿ ಮನವಿ ಮಾಡಿಕೊಂಡರು.
ಮನವಿ ಸ್ವೀಕರಿಸಿದ ಸಚಿವರು ತಿಂಗಳಿಗೆ ನಿಮಗೆ ಅಗತ್ಯವಿರುವಷ್ಟು ಓಷಧಿ ಪೂರೈಕೆ ಮಾಡುವುದು ಸೇರಿದಂತೆ ಇಲ್ಲಿಗೆ ಬರುವ ಮಾನಸಿಕವಿಕಲಚೇತನರ ಪ್ರಯಾಣಕ್ಕೆ ಅನುಕೂಲವಾಗಲು ಒಂದು ಓಮಿನಿ ವ್ಯಾನ್ ಹಾಗೂ ಈ ಕೇಂದ್ರದ ಆವರಣದಲ್ಲಿ ನೆಲ ಹಾಸನ್ನು ನಿರ್ಮಾಣ ಕಾರ್ಯವನ್ನು ಹಂತ ಹಂತವಾಗಿ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಕೆ.ವಿ.ಅನಂತಪದ್ಮನಾಭ, ನಿರ್ದೇಶಕರಾದ ಎಚ್.ವಿ.ರಾಮಕೃಷ್ಣಪ್ಪ, ಎಸ್.ಸೋಮಶೇಖರ್, ನಿವೃತ್ತ ವೈದ್ಯರಾದ ಡಾ ಜಿ.ಎನ್.ನಾರಾಯಣರೆಡ್ಡಿ, ಡಾ.ವೆಂಕಟರಾಮಯ್ಯ, ತಮೀಮ್‌ಅನ್ಸಾರಿ, ಮುಖಂಡರಾದ ಕಂಬದಹಳ್ಳಿ ಸುರೇಂದ್ರಗೌಡ, ಸಂತೋಷ್, ನಾಗೇಶ್, ಸುರೇಶ್, ಡಿ.ಎನ್.ದೇವರಾಜ್ ಹಾಜರಿದ್ದರು.