ಎಚ್.ಎನ್.ವ್ಯಾಲಿಯ ಸಂಸ್ಕರಿತ ನೀರು ಕೊನೆಗೂ ಶಿಡ್ಲಘಟ್ಟ ತಾಲ್ಲೂಕಿನ ಕೆರೆಗೆ ಹರಿದಿದ್ದು ರೈತ ಸಂಘದ ಮುಖಂಡರು ಹಾಗೂ ಸದಸ್ಯರು ಕೆರೆಗೆ ಪೂಜೆ ಸಲ್ಲಿಸಿ, ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದರು.
ದಕ್ಷಿಣ ಪೆನ್ನಾರ್ ನದಿ ಕಣಿವೆಯಲ್ಲಿರುವ ಶಿಡ್ಲಘಟ್ಟ ತಾಲ್ಲೂಕಿನ ಅಬ್ಬಲೂಡು ಕೆರೆಗೆ ಮಂಗಳವಾರ ಎಚ್.ಎನ್ ವ್ಯಾಲಿ ನೀರು ಹರಿದು ಬಂದಿದ್ದರಿಂದ ಈ ಭಾಗದ ರೈತರ ಸಂತಸ ಹೆಚ್ಚಿತ್ತು.
ಎಚ್.ಎನ್.ವ್ಯಾಲಿಯ ನೀರು ದಿಬ್ಬೂರು ಕೆರೆ, ಅಂಗರೇಕಹಳ್ಳಿಯನ್ನು ಹಾದು ಸುಮಾರು 51 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿರುವ ಅಬ್ಬಲೂಡು ಕೆರೆಯನ್ನು ಪ್ರವೇಶಿಸಿದೆ. 2.01 ಹೆಕ್ಟೇರ್ ನೀರು ಶೇಖರಣಾ ಸಾಮರ್ಥ್ಯವನ್ನು ಹೊಂದಿರುವ ಈ ಕೆರೆಯಿಂದ ಮುಂದೆ ಶಿಡ್ಲಘಟ್ಟದ ಹೊರವಲಯದ ಅಮ್ಮನಕೆರೆಗೆ ನೀರು ಬರಲಿದೆ. ಇದೇ ಅಮ್ಮನಕೆರೆಗೆ ಕೇಶವಾರದ ಕೆರೆಯ ಮೂಲಕವೂ ಎಚ್.ಎನ್.ವ್ಯಾಲಿಯ ನೀರು ಹರಿದು ಬರಲಿದೆ. ಮುಂದೆ ಬೆಳ್ಳೂಟಿ ಕೆರೆಯ ಮೂಲಕ ಭದ್ರನ ಕೆರೆಗೆ ನೀರು ಹರಿಯುತ್ತದೆ.
“ಕಳೆದ 25 ವರ್ಷಗಳಿಂದ ನಮ್ಮ ಬಯಲು ಸೀಮೆಗೆ ಕೃಷಿ ಆಧಾರಿತ ನೀರು ತರಲು ಸತತ ಹೋರಾಟ ನಡೆಸಲಾಗಿತ್ತು. ಇಂದು ಚಿಕ್ಕಬಳ್ಳಾಪುರ ತಾಲ್ಲೂಕಿನಿಂದ ಶಿಡ್ಲಘಟ್ಟ ತಾಲ್ಲೂಕಿನ ಕೆರೆಗೆ ನೀರು ಹರಿದು ಬಂದಿರುವುದರಿಂದ ರೈತ ಕುಲ ಸಂಭ್ರಮಿಸುವಂತಾಗಿದೆ. ನೀರಿಗಾಗಿ ಅನೇಕ ಮಂದಿ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಹೋರಾಟ ಮಾಡಿದ್ದರು. ಜೆ.ವೆಂಕಟಪ್ಪ, ಮುಳಬಾಗಿಲು ವೆಂಕಟರಾಮಯ್ಯ, ಜಿ.ವಿ.ಶ್ರೀರಾಮರೆಡ್ಡಿ, ಸಾದಲಿ ಜೈಪ್ರಕಾಶ್, ಎಸ್.ಎಂ.ನಾರಾಯಣಸ್ವಾಮಿ, ಮಾಜಿ ಶಾಸಕರಾದ ಸುಧಾಕರ್, ಕೃಷ್ಣಾರೆಡ್ಡಿ, ರಾಜಣ್ಣ, ಶಾಸಕ ವಿ.ಮುನಿಯಪ್ಪ ಮೊದಲಾದವರ ಪರಿಶ್ರಮವನ್ನು ಮರೆಯುವಂತಿಲ್ಲ. ಎತ್ತಿನಹೊಳೆ ಯೋಜನೆ, ಮೇಕೇದಾಟು ಯೋಜನೆ, ಕೃಷ್ಣಾ ಮತ್ತು ತುಂಗಭದ್ರಾ ನೀರಿಗೂ ರೈತಸಂಘದಿಂದ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದೇವೆ” ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಗುಡಿಹಳ್ಳಿ ನಾರಾಯಣಸ್ವಾಮಿ, ಕೆಂಪಣ್ಣ, ಮೂರ್ತಿ, ವೇಣು, ರಾಮಕೃಷ್ಣಪ್ಪ, ರಾಮಚಂದ್ರಪ್ಪ, ಮುನಿನಂಜಪ್ಪ ಹಾಜರಿದ್ದರು.