ಶಿಡ್ಲಘಟ್ಟ ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಪ್ರಗತಿ ಪರಿಶಿಲನಾ ಸಭೆ ನಡೆಸಿ ಆರೋಗ್ಯ ಸಚಿವ ಡಾ.ಸುಧಾಕರ್ ಮಾತನಾಡಿದರು.
ತಾಲ್ಲೂಕು ಮಟ್ಟದಲ್ಲಿಯೇ ವೆಂಟಿಲೇಟರುಗಳು ಇರಬೇಕೆನ್ನುವುದು ನಮ್ಮ ಉದ್ದೇಶ. ಕಳೆದ ವರ್ಷವೇ ಆರು ವೆಂಟಿಲೇಟರುಗಳನ್ನು ಶಿಡ್ಲಘಟ್ಟದ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಇನ್ನೂ ಅಳವಡಿಸಿಲ್ಲ. ತಾಂತ್ರಿಕ ಸಿಬ್ಬಂದಿಯ ಕೊರತೆ ಎನ್ನುತ್ತಿದ್ದಾರೆ. ಈ ಬಗ್ಗೆ ನಗರ ಆರೋಗ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದು, ಅತಿ ಶೀಘ್ರದಲ್ಲಿ ಅಳವಡಿಸಬೇಕೆಂದು ತಿಳಿಸಿರುವುದಾಗಿ ಅವರು ತಿಳಿಸಿದರು.
ನಮ್ಮಲ್ಲಿ ವೆಂಟಿಲೇಟರುಗಳ ಕೊರತೆಯಿಲ್ಲ. ವೆಂಟಿಲೇಟರುಗಳನ್ನು ಅಳವಡಿಸಿ ಚಿಕಿತ್ಸೆ ನೀಡುವ ವೈದ್ಯರು ಮತ್ತು ತಾಂತ್ರಿಕ ಸಿಬ್ಬಂದಿಯ ಕೊರತೆ ಗ್ರಾಮೀಣ ಭಾಗಗಳಲ್ಲಿದೆ. ಅದನ್ನು ನೀಗಿಸಲು ಈಗಾಗಲೇ ನೇರ ನೇಮಕಾತಿಯನ್ನು ಮಾಡಿಕೊಳ್ಳುತ್ತಿದ್ದೇವೆ. ಆದಷ್ಟು ಶೀಘ್ರದಲ್ಲಿ ನೇಮಕಾತಿ ಮಾಡಿಕೊಂಡು ಸೂಕ್ತ ಸ್ಥಳಗಳಿಗೆ ನಿಯೋಜನೆ ಮಾಡಲಾಗುವುದು.
ಶಿಡ್ಲಘಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ೫೦ ಹಾಸಿಗೆಗಳಿದ್ದು ಅವುಗಳಿಗೆ ಆಮ್ಲಜನಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ತಾಲ್ಲೂಕು ಕೇಂದ್ರಗಳಲ್ಲೂ ಆಮ್ಲಜನಕ ತಯಾರಿಕಾ ಘಟಕಗಳನ್ನು ಸ್ಥಾಪಿಸಲಾಗುವುದು. ಈಗಾಗಲೇ ತಾಂತ್ರಿಕ ಪರಿಣಿತರು ಶಿಡ್ಲಘಟ್ಟ ಸೇರಿದಂತೆ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಿಗೂ ಪರಿಶೀಲನೆ ನಡೆಸಿದ್ದಾರೆ. ಲಸಿಕೆಗಳು ಇನ್ನೊಂದು ವಾರದಲ್ಲಿ ಎಲ್ಲೆಡೆ ಲಭ್ಯವಾಗಲಿದೆ ಎಂದರು.
ಜಿಲ್ಲಾಧಿಕಾರಿ ಆರ್.ಲತಾ, ಪೊಲೀಸ್ ಎಸ್.ಪಿ. ಮಿಥುನ್ ಕುಮಾರ, ಉಪವಿಭಾಗಾಧಿಕಾರಿ ರಘುನಂದನ್, ತಹಶೀಲ್ದಾರ್ ರಾಜೀವ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮೂರ್ತಿ, ನಗರ ಆರೋಗ್ಯಾಧಿಕಾರಿ ಡಾ.ವಾಣಿ, ಬಿ.ಜೆ.ಪಿ ಮುಖಂಡರು ಹಾಜರಿದ್ದರು.