Haralahalli, Sidlaghatta : ನಮ್ಮ ನುಡಿ. ಚೆಲುವ ಕನ್ನಡವನ್ನು ಆ ತಾಯಿಯ ಮಕ್ಕಳಾದ ನಾವೇ ಉಳಿಸಬೇಕು, ಬೆಳೆಸಬೇಕು. ನಮ್ಮ ತಾಯಿ ನಮ್ಮ ನಿರ್ಲಕ್ಷ್ಯದಿಂದ ಕೊರಗಿ ಸಾಯುವಂತಾಗಬಾರದು. ಕನ್ನಡ ತಾಯಿ ಕರ್ನಾಟಕದಲ್ಲಿ ಕಳೆದು ಹೋಗದಂತೆ, ಕರ್ನಾಟಕ ಕರಗಿ ಹೋಗದಂತೆ ನೆಲ-ಜಲ, ಭಾಷೆ-ಸಂಸ್ಕೃತಿಗಳ ಉಳುವಿಗಾಗಿ ನಾವು ಶ್ರಮಿಸಬೇಕು ಎಂದು ಮುಖ್ಯಶಿಕ್ಷಕ ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ಶ್ರೀ ಭುವನೇಶ್ವರಿ ಕನ್ನಡ ಯುವಕರ ಸಂಘದ ವತಿಯಿಂದ ಆಯೋಜಿಸಿದ್ದ 68 ನೇ ಕನ್ನಡ ರಾಜ್ಯೋತ್ಸವ ಹಾಗೂ ಡಾ.ಪುನೀತ್ ರಾಜ್ ಕುಮಾರ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ತಾಯಿ ಬದುಕಿದರೆ ಕರ್ನಾಟಕದಲ್ಲಿಯೇ ಬದುಕಬೇಕು, ಬೆಳೆದರೆ ಕರ್ನಾಟಕದಲ್ಲಿಯೇ ಬೆಳೆಯಬೇಕು. ಅಂತಹ ಕನ್ನಡ ಪ್ರಜ್ಞೆ ಹಾಗು ಕರ್ನಾಟಕ ಪ್ರಜ್ಞೆಯನ್ನು ನಾವೆಲ್ಲ ಮೈಗೂಡಿಸಿಕೊಂಡು, ಬೆಳೆಯೋಣ, ಕನ್ನಡ ನಾಡು-ನುಡಿಯನ್ನು ಬೆಳೆಸೋಣ ಎಂದರು.
ಕರ್ನಾಟಕ ಜಾನಪದ ಪರಿಷತ್ ತಾಲ್ಲುಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಕನ್ನಡಿಗರಾದ ನಾವು ಅಭಿಮಾನವನ್ನು ಬೆಳೆಸಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಹಾಗೆಯೇ ಕನ್ನಡ ನಾಡು-ನುಡಿಯ ಅಭಿವೃದ್ಧಿಯ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುವ ದಿನವೂ ಆಗಿದೆ ಎಂದರು.
ವಿವಿಧ ಸ್ಪರ್ಧೆಯಲ್ಲಿ ವಿಜೇತ ಗ್ರಾಮದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜಾನಪದ ಕಲಾವಿದ ದೇವರಮಳ್ಳೂರು ಮಹೇಶ್ ಕುಮಾರ್ ಜಾನಪದ ಗೀತೆಗಳನ್ನು ಹಾಡಿದರು.
ವೈದ್ಯ ಡಾ.ಡಿ.ಟಿ.ಸತ್ಯನಾರಾಯಣರಾವ್, ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ, ಎಂ.ಪಿ.ಸಿ.ಎಸ್ ಅಧ್ಯಕ್ಷ ಎಚ್.ಎಂ.ಪಟಾಲಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಆರ್.ಮುನಿಯಪ್ಪ ಹಾಜರಿದ್ದರು.