ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಶುಕ್ರವಾರ ಹಳ್ಳಿ ಮತ್ತು ಪಂಚಾಯಿತಿ ಮಟ್ಟದ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಹಂಡಿಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ 115 ಪಾಸಿಟೀವ್ ಇದ್ದದ್ದು ಇದೀಗ 21 ಕ್ಕೆ ಇಳಿದಿದೆ. ಅದನ್ನು ಇನ್ನು ಎರಡು ವಾರದೊಳಗೆ ಶೂನ್ಯಕ್ಕೆ ಇಳಿಸಬೇಕು ಎಂದು ಅವರು ತಿಳಿಸಿದರು.
ಜನರಲ್ಲಿ ಕೊರೊನಾ ಕುರಿತಾದ ಭಯವನ್ನು ಹೋಗಲಾಡಿಸಿ, ಚಿಕಿತ್ಸೆ, ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಲಸಿಕೆ ಪಡೆಯುವುದರ ಬಗ್ಗೆ ಪ್ರತಿಯೊಂದು ಹಳ್ಳಿಯ ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ಮೂಲಕ ಯುದ್ಧದ ಸನ್ನಿವೇಶದಲ್ಲಿ ಕೆಲಸ ಮಾಡುವಂತೆ ಕೋವಿಡ್ ಕಾರ್ಯಪಡೆ ಸದಸ್ಯರು ಚುರುಕಾಗಿ ಮತ್ತು ಸಕ್ರಿಯವಾಗಿ ಕೆಲಸ ಮಾಡಬೇಕಿದೆ. ಈ ರೀತಿಯಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿಯೂ ನಡೆದಲ್ಲಿ ಇನ್ನು ಹದಿನೈದು ದಿನಗಳಲ್ಲಿ ತಾಲ್ಲೂಕಿನಿಂದ ಕೊರೊನಾವನ್ನು ಹೊರಗಟ್ಟಬಹುದು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಇಒ ಚಂದ್ರಕಾಂತ್ ಮಾತನಾಡಿ, ಬೆಂಗಳೂರಿನಿಂದ ಬರುವವರು, ವಿವಾಹವಾಗಿ ಬರುವವರು, ಏರ್ ಪೋರ್ಟ್ ಉದ್ಯೋಗಿಗಳು ಹೀಗೆ ಹೊರಗಡೆ ಹೋಗಿ ಬರುವವರ ಬಗ್ಗೆ ಹೆಚ್ಚಿನ ನಿಗಾ ಇರಬೇಕು. ಅವರ ಕುಟುಂಬದವರಿಗೆ ಮುನ್ನೆಚ್ಚರಿಕೆಯ ಬಗ್ಗೆ ವಿವರಿಸಬೇಕು. ಸ್ವಲ್ಪ ಮಾತ್ರ ಕೊರೊನಾ ಲಕ್ಷಣಗಳು ಕಾಣಿಸಿದರೂ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೋವಿಡ್ ಕಾರ್ಯಪಡೆ ಸದಸ್ಯರು ಮನೆಮನೆ ಭೇಟಿ ನೀಡಿ ಎಚ್ಚರಿಕೆಯಿಂದ ಗಮನಿಸಿಕೊಳ್ಳಬೇಕು. ಅಪ್ಪೇಗೌಡನಹಳ್ಳಿಯಲ್ಲಿ ಹೊರರಾಜ್ಯಗಳಿಂದ ಬಂದಿರುವ ಕಟ್ಟಡ ಕಾರ್ಮಿಕರಿಗೆ ಸ್ವಾಬ್ ಪರೀಕ್ಷೆ ಮಾಡಿಸಬೇಕು ಎಂದರು.
ತಹಶೀಲ್ದಾರ್ ರಾಜೀವ್ ಮಾತನಾಡಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಕೋವಿಡ್ ಕಾರ್ಯಪಡೆ ಸದಸ್ಯರು ಎಷ್ಟು ಚೆನ್ನಾಗಿ ಕೆಲಸ ಮಾಡಿದರೆ ಅಷ್ಟು ಸಮಾಜ ಆರೋಗ್ಯವನ್ನು ಹೊಂದುತ್ತದೆ. ಲಸಿಕೆ ಹಾಕಿಸಲು ಜನರ ಮನವೊಲಿಸಬೇಕಾಗಿರುವುದು ದುರ್ಧೈವ. ಆದರೂ ಈ ಬಗ್ಗೆ ಅರಿವು ಮೂಡಿಸಿ ಅದರ ಲಭಾಂಶದ ಬಗ್ಗೆ ತಿಳಿಸಿ, ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತಾಗಲಿ, ಆ ಮೂಲಕ ಕೊರೊನಾದಿಂದ ಸಮಾಜವನ್ನು ರಕ್ಷಿಸುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಅಂಗವಿಕಲರು, ಏರ್ ಪೋರ್ಟ್ ಉದ್ಯೋಗಿಗಳು, ಕ್ಯಾಬ್ ಚಾಲಕರು ಹಾಗೂ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯನ್ನು ಹಾಕಲಾಯಿತು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಮೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿರೆಡ್ಡಿ, ಸದಸ್ಯ ಬಿ.ಎಂ.ಜಯರಾಮ್, ಪಿಡಿಒ ಅಂಜನ್ ಕುಮಾರ್, ನೋಡಲ್ ಅಧಿಕಾರಿ ಜನಾರ್ಧನ್, ಕಾರ್ಯದರ್ಶಿ ಎಚ್.ಎನ್.ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯರು, ಆಶಾ ಕಾರ್ಯಕರ್ತೆಯರು, ಕೋವಿಡ್ ಕಾರ್ಯಪಡೆ ಸದಸ್ಯರು ಹಾಜರಿದ್ದರು.