ಶಿಡ್ಲಘಟ್ಟದ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ಅವರ ಮನೆಗೆ ಸೌಹಾರ್ಧ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಸೌಹಾರ್ಧ ಭೇಟಿ ಇದಾದರೂ ವಿಧಾನಪರಿಷತ್ ಚುನಾವಣೆಯ ಹಿನ್ನಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದ್ದು ಮುಂದಿನ ವಾರ ಮತ್ತೆ ಭೇಟಿ ನೀಡಿ ಚುನಾವಣೆ ಬಗ್ಗೆ ಚರ್ಚಿಸುವುದಾಗಿ ಹೇಳಿದರು.
ಈ ಹಿಂದೆ ನಾನು ರವಿಕುಮಾರ್ ಅವರ ಬಗ್ಗೆ ತಪ್ಪಾಗಿ ಗ್ರಹಿಸಿದ್ದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರ ಶಕ್ತಿ, ಅವರ ಹಾಗೂ ಕಾರ‍್ಯಕರ್ತರ ನಡುವಿನ ಬಾಂಧವ್ಯದ ಬಗ್ಗೆ ತಿಳಿದುಕೊಂಡೆ. ಮಗಳ ಸಾವಿನ ನೋವಿನಲ್ಲಿ ಮನೆಯಲ್ಲಿ ಕೂರದೆ, ನಿಮ್ಮನ್ನು ನಂಬಿದ ಕಾರ‍್ಯಕರ್ತರ ಕಷ್ಟ ಸುಖಗಳಲ್ಲಿ ಭಾಗವಹಿಸುವ ಮೂಲಕ ನಿಮ್ಮ ಮಗಳ ಆತ್ಮಕ್ಕೆ ಶಾಂತಿ ಸಿಗುವಂತಾಗಲಿ ಎಂದರು.
ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಳ ಒಪ್ಪಂದವನ್ನು ಮಾಡಿಕೊಳ್ಳುತ್ತವೆ. ಆದರೆ ನಮ್ಮ ಜೆಡಿಎಸ್ ಪಕ್ಷದ ಮೇಲೆ ಒಳ ಒಪ್ಪಂದದ ಅಪ ಪ್ರಚಾರ ಮಾಡಿ ಕಾರ‍್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿ ಹಾಗೂ ಮಂತ್ರಿಗಳ ಅತಿವೃಷ್ಠಿಯ ವೀಕ್ಷಣೆ, “ಬಂದ ಪುಟ್ಟ ಹೋದ ಪುಟ್ಟ” ಎಂಬಂತಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಅತಿವೃಷ್ಠಿಯಲ್ಲಿ ಮನೆ ಕಳೆದುಕೊಂಡವರಿಗೆ ಬೆಳೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ನೀಡಿಲ್ಲ ಎಂದು ಅವರು ಆರೋಪಿಸಿದರು.
ಬಿಜೆಪಿಯ ಸಾಕಷ್ಟು ಮಂತ್ರಿಗಳಿಗೆ ಜನ ಸಾಮಾನ್ಯರ ಕಷ್ಟಗಳನ್ನು ಅರಿಯಲು ಪುರುಸೊತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಜನ ಸಾಮಾನ್ಯರೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಯಾವುದೆ ಚುನಾವಣೆ ಬಂದರೂ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಕ್ಕೆ ಜೆಡಿಎಸ್ ಬಗ್ಗೆ ಜ್ವರ ಶುರುವಾಗುತ್ತದೆ. ಸುಖಾ ಸುಮ್ಮನೆ ನಮ್ಮ ಜೆಡಿಎಸ್ ಪಕ್ಷದ ಬಗ್ಗೆ ಅಪಪ್ರಚಾರ ಮಾಡುತ್ತಾರೆ. ಅದೇಕೆಂದು ನನಗೆ ಗೊತ್ತಿಲ್ಲ ಎಂದರು.
ಜೆಡಿಎಸ್ ಮುಖಂಡರಾದ ಬಿ.ಎನ್.ರವಿಕುಮಾರ್, ಮಾಜಿ ಶಾಸಕರಾದ ಬಚ್ಚೇಗೌಡ, ವೆಂಕಟಶಿವಾರೆಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡ, ಬಿ.ಎನ್.ಸಚಿನ್, ವಕ್ಕಲೇರಿ ರಾಮು, ಬಂಕ್ ಮುನಿಯಪ್ಪ್ ಹಾಜರಿದ್ದರು.